Advertisement

ಗುರುಪುರ ಗ್ರಾ.ಪಂ.ಗೆ ರಾಷ್ಟ್ರೀಯ ಪ್ರಶಸ್ತಿ

11:35 PM Oct 23, 2019 | mahesh |

ಬಜಪೆ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ “ನಮ್ಮ ಗ್ರಾಮ ನಮ್ಮ ಯೋಜನೆ’ (ಜಿಪಿಡಿಪಿ)ಯಡಿ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತ್‌ಗೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. ಆದರೆ ದಿಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕಾದ ದಿನ ಬೆಳಗ್ಗೆಯಷ್ಟೇ ಈ ವಿಚಾರ ತಿಳಿಸುವ ಇಮೈಲ್‌ ಗುರುಪುರ ಗ್ರಾ.ಪಂ.ಗೆ ಬಂದಿದ್ದು, ಪಂಚಾಯತ್‌ ಅಧ್ಯಕ್ಷ ಅಥವಾ ಪ್ರತಿನಿಧಿಗೆ ಹೋಗಲು ಸಾಧ್ಯವಾಗಿಲ್ಲ.

Advertisement

ಗ್ರಾಮೀಣ ಪ್ರದೇಶದ ಜನರ ಮೂಲ ಸೌಲಭ್ಯಗಳ ಸಮಗ್ರ ಅಭಿವೃದ್ಧಿಗಾಗಿ 5 ವರ್ಷಗಳ ಅವಧಿಗೆ ಜನರ ಸಹಭಾಗಿತ್ವದಲ್ಲಿ ಅತ್ಯುತ್ತಮ ಯೋಜನೆ ರೂಪಿಸಿದ್ದಕ್ಕಾಗಿ ಗ್ರಾ.ಪಂ.ಗಳಿಗೆ ರಾಷ್ಟ್ರಮಟ್ಟದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಮಂಗಳೂರು ತಾಲೂಕಿನ ಗುರುಪುರ ಗ್ರಾ.ಪಂ. ದ್ವಿತೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಥಮ ಸ್ಥಾನ ಕೇರಳದ ಕಣ್ಣೂರು ಜಿಲ್ಲೆಯ ಪಪ್ಪಿನಿಶೆರಿ ಗ್ರಾ.ಪಂ., ತೃತೀಯ ಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕರಾಕಂಬಡಿ ಗ್ರಾ.ಪಂ. ಪಾಲಾಗಿದೆ.

ಪ್ರಶಸ್ತಿ ಸ್ವೀಕಾರದ ದಿನ ಬೆಳಗ್ಗೆ ಬಂದ ಇಮೈಲ್‌
ಅ.23ರಂದು ಹೊಸದಿಲ್ಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಪ್ಲೆಕ್ಸ್‌ನ ಸಿ. ಸುಬ್ರಮಣಿಯಮ್‌ ಹಾಲ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಪಂಚಾಯತ್‌ನ ಅಧ್ಯಕ್ಷರು ಅಥವಾ ಪ್ರತಿನಿಧಿಗಳು ಹಾಜರಿರಬೇಕು ಎಂದು ಸೂಚಿಸುವ ಇಮೈಲ್‌ ಅ.23ರ ಬೆಳಗ್ಗೆಯಷ್ಟೇ ಗುರುಪುರ ಗ್ರಾ.ಪಂ.ಗೆ ಬಂದಿದೆ. ಆದರೆ 2 ಸಾವಿರಕ್ಕೂ ಹೆಚ್ಚು ಕಿ.ಮೀ. ದೂರವಿದ್ದು, ವಾಯು ಸಾರಿಗೆಯಲ್ಲಿ ಸುಮಾರು ನಾಲ್ಕು ತಾಸು ತಗಲುವ ಪ್ರಯಾಣ ನಡೆಸಿ ದಿಲ್ಲಿ ತಲುಪಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲ.

ಗುರುಪುರ ಗ್ರಾ. ಪಂ.ಸಾಧನೆಯೇನು?
ಪ್ರಶಸ್ತಿ ಪಾತ್ರವಾಗಿರುವ ಗುರುಪುರ ಗ್ರಾ.ಪಂ. ಗ್ರಾಮದ ಒಟ್ಟು ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ರೂಪಿಸಿದೆ. ಸಂಜೀವಿನಿ ಕಟ್ಟಡ, ಕಿಂಡಿ ಅಣೆಕಟ್ಟು, ಕಾಲು ಸಂಕ, ನೀರಾವರಿ ತೋಡು, ಮಳೆ ನೀರು ಕೊಯ್ಲು, ಶಿಕ್ಷಣ, ರಸ್ತೆಗಳ ಅಭಿವೃದ್ಧಿ, ಆರೋಗ್ಯ, ಗ್ರಂಥಾಲಯ, ಬ್ಯಾಂಕಿಂಗ್‌ ಸೌಲಭ್ಯ, ನೈರ್ಮಲ್ಯ, ವೈಯಕ್ತಿಕ ಶೌಚಾಲಯ, ಆಟದ ಮೈದಾನ ಇತ್ಯಾದಿ ಒಳಗೊಂಡ ಯೋಜನೆಯನ್ನು ತಯಾರಿಸಲಾಗಿದೆ.

ಈ ಅತ್ಯುತ್ತಮ ಯೋಜನೆಯ ತಯಾರಿಗೆ ಸಹಕರಿಸಿದ ಎಲ್ಲ ಗ್ರಾಮಸ್ಥರಿಗೆ, ಜನಪ್ರತಿನಿಧಿಗಳಿಗೆ, ಇಲಾಖಾ ಮಟ್ಟದ ಅಧಿಕಾರಿಗಳಿಗೆ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರಿಗೆ ಮತ್ತು ಪಂಚಾಯತ್‌ ಸಿಬಂದಿಗೆ ಕೃತಜ್ಞತೆಗಳು ಎಂದು ಗುರುಪುರ ಗ್ರಾಮ ಪಂಚಾಯತ್‌ ಪಿಡಿಒ ಅಬೂಬಕ್ಕರ್‌ ಹೇಳಿದ್ದಾರೆ.

Advertisement

ಕಲ್ಲಮುಂಡ್ಕೂರು ಪಿಡಿಒ ರೇಖಾ ಅವರು ಇನ್ನಾವುದೋ ಕಾರ್ಯಕ್ರಮದ ನಿಮಿತ್ತ ದಿಲ್ಲಿಗೆ ತೆರಳಿದ್ದವರು ಗುರುಪುರ ಗ್ರಾ.ಪಂ. ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷ ಅಬೂಬಕ್ಕರ್‌ ತಿಳಿಸಿದ್ದಾರೆ.

ಮೂರೂ ಪ್ರಶಸ್ತಿ ಪಾತ್ರರು ಭಾಗವಹಿಸುವುದು ಅನುಮಾನ
ಪ್ರಶಸ್ತಿ ಘೋಷಣೆಯ ಆದೇಶ ಪತ್ರ ಅ.22ರಂದು ತಯಾರಾಗಿದ್ದು, ಅದರಲ್ಲಿ ಪಂಚಾಯತ್‌ರಾಜ್‌ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ| ಸಂಜೀವ್‌ ಪಟ್‌ಜೋಶಿ ಅಂದೇ ಸಹಿ ಹಾಕಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಇನ್ನುಳಿದ ಎರಡು ಗ್ರಾ.ಪಂ.ಗಳೂ ದಕ್ಷಿಣ ಭಾರತದವು. ಹೀಗಾಗಿ ಈ ಎರಡು ಗ್ರಾ.ಪಂ.ಗಳ ಅಧ್ಯಕ್ಷರು ಅಥವಾ ಪ್ರತಿನಿಧಿ ದಿಲ್ಲಿಗೆ ತೆರಳಲು ಸಾಧ್ಯವಾಗದು. ಹೀಗಾಗಿ ಪ್ರಶಸ್ತಿ ಪ್ರದಾನ ಸಮಾರಂಭವೇ ನಿರರ್ಥಕವಾಗುವ ಸಾಧ್ಯತೆ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next