Advertisement

ಬದುಕು ಭದ್ರಗೊಳಿಸಿದ ಮಹಿಳಾ ಸಂಘ

03:47 PM Mar 07, 2020 | Suhan S |

ಲಕ್ಷ್ಮೇಶ್ವರ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಮಾಗಡಿಯ ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘವು ಗ್ರಾಪಂ ಒಕ್ಕೂಟದ ನಿಧಿಯಿಂದ ಶೇ. 1, ಸ್ಥಳೀಯ ಬ್ಯಾಂಕ್‌ ಶೇ. 0.70 ಮತ್ತು ತಮ್ಮದೇ ಸಂಘದ ಉಳಿತಾಯ ನಿಧಿಯಿಂದ ಶೇ. 2 ನಂತೆ ಸಬ್ಸಿಡಿ ರಹಿತ ಸಾಲರೂಪದಲ್ಲಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದಾರೆ.

Advertisement

2012ಕ್ಕೆ ಪ್ರಾರಂಭವಾದ ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘದಲ್ಲಿ ಒಟ್ಟು 12 ಜನ ಸದಸ್ಯರಿದ್ದು, ಬಹುತೇಕ ಹಿಂದುಳಿದ ವರ್ಗದವರೇ ಆಗಿದ್ದಾರೆ. ರೇಖಾ ತಳವಾರ, ಗೌರವ್ವ ಹೆಳವರ, ರತ್ನವ್ವ ತಳವಾರ, ದ್ಯಾಮವ್ವ ಶಿರುಂದ, ಗಿರಿಜವ್ವ ಮಲಗೌಡರ, ಶಿವವ್ವ ಭಜಂತ್ರಿ, ಲಕ್ಷ್ಮವ್ವ ಗುಂಜಳ, ಗೌರವ್ವ ಕಟ್ಟಿಮನಿ, ವಿಜಯಲಕ್ಷ್ಮೀ ಕುರ್ತಕೋಟಿ, ಚನ್ನಬಸವ್ವ ಹಿತ್ತಲಮನಿ, ಸುಮಾ ನಾಯಕ, ಫಕ್ಕೀರವ್ವ ವಡ್ಡರ ಇವರೇ 12 ಜನ ಸಾಧಕ ಮಹಿಳೆಯರು.

ಪ್ರಾರಂಭದಲ್ಲಿ ಪ್ರತಿ ಸದಸ್ಯರು ವಾರಕ್ಕೆ 20 ರೂ. ಗಳಂತೆ ಸೇರಿಸಿ ಸಂಘದ ಖಾತೆಗ ಜಮೆ ಮಾಡುತ್ತಾ ಕಡಿಮೆ ಮೊತ್ತದ ಸಾಲ ಸೌಲಭ್ಯ ಪಡೆದುಕೊಳ್ಳುತ್ತಿದ್ದರು. 2015ರಿಂದ ಗ್ರಾಪಂ ಮಟ್ಟದ ಒಕ್ಕೂಟದಲ್ಲಿ ಸೇರ್ಪಡೆಗೊಂಡು ಲಕ್ಷದ ವರೆಗೂ ಸಾಲ ಸೌಲಭ್ಯ ಪಡೆಯುವ ಮೂಲಕ ಟೇಲರಿಂಗ್‌, ಕಿರಾಣಿ ವ್ಯಾಪಾರ, ಹೋಟೆಲ್‌, ಕಸಬರಿಗೆ ತಯಾರಿಕೆ, ಕುರಿ ಸಾಕಾಣಿಕೆ, ಕೃಷಿ, ಹೈನುಗಾರಿಗೆ ಮಾಡುವ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಸಂಜೀವಿನಿ ಒಕ್ಕೂಟ, ಸ್ಥಳೀಯ ಕೆವಿಜಿ ಬ್ಯಾಂಕ್‌ ಮತ್ತು ಸಂಘದ ಉಳಿತಾಯ ಖಾತೆಯಿಂದ ಅನೇಕ ಬಾರಿ ಲಕ್ಷಾಂತರ ರೂ. ಸಾಲ ಪಡೆದು ಸಕಾಲಿಕ ಮರುಪಾವತಿ ಮಾಡುವ ಮೂಲಕ ಸಂಘ ಮತ್ತು ಸದಸ್ಯರು ಆರ್ಥಿಕ ಪ್ರಗತಿ ಹೊಂದುವಲ್ಲಿ ಶ್ರಮಿಸಿದ್ದಾರೆ. ಇದೀಗ ಸಂಘ ಒಟ್ಟು 50 ಲಕ್ಷದಷ್ಟು ವಹಿವಾಟು ನಡೆಸುವಷ್ಟು ಸಮರ್ಥವಾಗಿದೆ.

ಸಂಘದ ಮಹಿಳೆಯರು ಕೇವಲ ಸಾಲ ಪಡೆದು ಸ್ವಯಂ ಪ್ರಗತಿ ಹೊಂದುವುದಲ್ಲದೇ ಸರ್ಕಾರ, ಗ್ರಾಪಂ, ಸ್ಥಳೀಯ ಸಂಸ್ಥೆಗಳು ನಡೆಸುವ ಆರೋಗ್ಯ, ಶಿಕ್ಷಣ, ಮತದಾನ, ಸರ್ಕಾರದ ಯೋಜನೆಗಳ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ಸಂಘದ ನಿಯಮಾವಳಿಗಳನ್ನು ಕಾಲಕಾಲಕ್ಕೆ ಅನುಸರಿಸುವ ಮೂಲಕ ಮಾಗಡಿ ಗ್ರಾಪಂ ವ್ಯಾಪ್ತಿಯಲ್ಲಿರುವ 64 ಅಷ್ಟೇ ಅಲ್ಲದೇ ಇಡೀ ರಾಜ್ಯದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಮಾದರಿಯಾಗಿದ್ದಾರೆ.

Advertisement

ಇವರ ಸೇವೆ, ಪ್ರಾಮಾಣಿಕ ಪ್ರಯತ್ನ, ಸಂಘದ ನಿರ್ವಹಣೆ, ಸರ್ಕಾರ ಉದ್ದೇಶ ಸಾಫಲ್ಯತೆಗೆ ಕಾರಣವಾಗಿರುವುದು ಸೇರಿ ಎಲ್ಲ ರೀತಿಯ ಮಾನದಂಡಗಳನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ದೀನದಯಾಳ್‌ ಅಂತ್ಯೋದಯ ಯೋಜನೆಯಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮಾಗಡಿಯ ರೇಣುಕಾದೇವಿ ಮಹಿಳಾ ಸ್ವ-ಸಹಾಯ ಗುಂಪಿಗೆ ರಾಷ್ಟ್ರೀಯ ಪುರಸ್ಕಾರ ನೀಡುತ್ತಿದೆ. ಮಾ. 7ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಈ ಪುರಸ್ಕಾರ ನೀಡಲಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ನಮಗೆ ನಾವೇ ಸಮಾನ ಮನಸ್ಕರು ರಚಿಸಿಕೊಂಡ ಸ್ವ-ಸಹಾಯ ಸಂಘ ಬದುಕಿಗೆ ದಾರಿ ತೋರಿತು. ಸರ್ಕಾರ, ಬ್ಯಾಂಕ್‌ನ ಸಹಾಯದಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ಚಹಾ ಅಂಗಡಿ ನಡೆಸುವ ಮೂಲಕ ನನ್ನ ಮೂರು ಹೆಣ್ಣು ಮಕ್ಕಳಿಗೆ ಸುಂದರ ಬದುಕು ಕಟ್ಟಿಕೊಡಲು ಸಾಧ್ಯವಾಗಿದೆ. ಆಗ ಏನೂ ಅರಿಯದ ನಾನು ಈಗ ಎಲ್ಲ ನಿಭಾಯಿಸ ಬಲ್ಲೆ ಎಂಬ ಆತ್ಮ ವಿಶ್ವಾಸಕ್ಕೆ ಸಂಘದ ಶಕ್ತಿಯೇ ಕಾರಣವಾಗಿದೆ.  –ಗಿರಿಜಮ್ಮ ಹೆಳವರ, ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘದ ಕಾರ್ಯದರ್ಶಿ

ರೇಣುಕಾದೇವಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಇದೇ ಮೊದಲ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ. ಜಿಲ್ಲೆಯಲ್ಲಿ 5,770 ಸಂಘಗಳಿದ್ದರೂ ಈ ಪುರಸ್ಕಾರ ಲಭಿಸಲು ಈ ಸಂಘ ಅನುಸರಿಸಿದ ಸೂತ್ರಗಳು, ಕೈಗೊಂಡ ಜೀವನೋಪಾಯ ಚಟುವಟಿಕೆಗಳು, ಅವರ ಸಾರ್ಥಕ ಬದುಕಿಗೆ ಮಾರ್ಗದರ್ಶನ ಮಾಡಿದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರಣರಾಗಿದ್ದಾರೆ. -ಡಾ| ಕೆ. ಆನಂದ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next