ಸೊಲ್ಲಾಪುರ: “ನೋ ಬ್ಯಾಗ್ ಡೇ ಸ್ಕೂಲ್’ ಎನ್ನುವ ಮಹಾರಾಷ್ಟ್ರ ರಾಜ್ಯ ಸರ್ಕಾರದ ಯೋಜನೆಯನ್ನು ಶಾಲೆಯಲ್ಲಿ ಕಾರ್ಯರೂಪಕ್ಕೆ ತಂದಿದ್ದಕ್ಕಾಗಿ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಶಿಕ್ಷಕ ಶರಣಪ್ಪ ಫುಲಾರಿಗೆ ಸರ್ ಫೌಂಡೇಶನ್ ವತಿಯಿಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುಣೆ ಜಿಲ್ಲೆಯ ಲೋಣಾವಳಾದ ಸಿಂಹಗಡ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ “ಎಜ್ಯುಕೇಶನಲ್ ಟೀಚರ್ ಇನೋವ್ಹೇಶನ್’ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಡಾ| ಅರವಿಂದ ನಾತು ಈ ರಾಷ್ಟ್ರೀಯ ಪ್ರಶಸ್ತಿಯನ್ನು ಶಿಕ್ಷಕ ಶರಣಪ್ಪ ಫುಲಾರಿಗೆ ನೀಡಿ, ಗೌರವಿಸಿದರು.
ಮಹಾರಾಷ್ಟ್ರ ರಾಜ್ಯದ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಜಿ ಅಧ್ಯಕ್ಷೆ ಡಾ| ಶಕುಂತಲಾ ಕಾಳೆ, ರಾಜ್ಯ ಸಕ್ಕರೆ ಆಯುಕ್ತರಾದ ಶೇಖರ ಗಾಯಕವಾಡ, ಸೃಷ್ಟಿ , ಹನಿ ಬಿ ನೆಟವರ್ಕ್‌ನ ರಾಷ್ಟ್ರೀಯ ಸಮನ್ವಯಕ ಚೇತನ ಪಟೇಲ್, ಸರ್ ಫೌಂಡೇಶನ್ ರಾಜ್ಯ ಸಮನ್ವಯಕರಾದ ಸಿದ್ಧರಾಮ ಮಾಶಾಳೆ, ಬಾಳಾಸಾಹೇಬ ವಾಘ, ಹೇಮಾ ಶಿಂಧೆ ಹಾಜರಿದ್ದರು.
ಮಕ್ಕಳ ಪ್ರತಿಭೆ ಬೆಳಕಿಗೆ ತಂದ ಶಿಕ್ಷಕ
ಶಿಕ್ಷಕ ಶರಣಪ್ಪ ಫುಲಾರಿ ಅವರು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದ “ನೋ ಬ್ಯಾಗ್ ಡೇ ಸ್ಕೂಲ್’ ಎನ್ನುವ ಯೋಜನೆಯಡಿ ಪ್ರತಿ ಶನಿವಾರ ಪಠ್ಯ-ಪುಸ್ತಕದ ಬ್ಯಾಗ್‌ನ್ನು ಮಕ್ಕಳು ಶಾಲೆಗೆ ತರದೇ, ಅವರಲ್ಲಿನ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟ್ಯ, ಭಾಷಣ ಹಾಗೂ ಇನ್ನಿತರ ಸಾಂಸ್ಕೃತಿಕ ಪ್ರತಿಭೆಯನ್ನು ಬೆಳಕಿಗೆ ಬರುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಲಭಿಸಿದೆ. ಅಲ್ಲದೇ ಜನರ ಸಹಭಾಗಿತ್ವದಿಂದ ಇವರು ಕಾರ್ಯ ನಿರ್ವಹಿಸಿದ ನಾಲ್ಕು ಶಾಲೆಗಳಲ್ಲಿ (ನಾಗಣಸೂರು, ಬಬಲಾದ, ತೋಳನೂರ, ಜಗಾಪುರ) ಈ ಲರ್ನಿಂಗ್, ಡಿಜಿಟಲ್, ಟ್ಯಾಬ್ ಶಾಲೆಗಳನ್ನಾಗಿ ಪರಿವರ್ತಿಸಿದ್ದರಿಂದ ಇವರಿಗೆ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಸಂಸದ ಡಾ| ಜಯಸಿದ್ಧೇಶ್ವರ ಸ್ವಾಮೀಜಿ, ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಮಾಜಿ ಶಾಸಕ ಸಿದ್ಧರಾಮ ಮ್ಹೇತ್ರೆ, ಸಿಇಒ ದಿಲೀಪ ಸ್ವಾಮಿ, ಪ್ರಾಥಮಿಕ ಶಿಕ್ಷಣಾಧಿಕಾರಿ ಡಾ| ಕಿರಣ ಲೋಹಾರ, ಬಿಇಒ ಅಶೋಕ ಭಾಂಜೆ, ವಿಸ್ತಾರ ಅಧಿಕಾರಿ ರತಿಲಾಲ ಭುಸೆ, ಸುಹಾಸ ಗುರವ, ಕೇಂದ್ರಪ್ರಮುಖ ಗುರುನಾಥ ನರೂಣೆ, ಮುಖ್ಯಶಿಕ್ಷಕಿ ಶಾಂತಾ ತೋಳನೂರೆ ಹಾಗೂ ಶಿಕ್ಷಕರು, ನಾಗಣಸೂರ ಗ್ರಾಪಂ ಅಧ್ಯಕ್ಷೆ ಅಂಬುಬಾಯಿ ನಾಗಲಗಾಂವ, ಉಪಾಧ್ಯಕ್ಷ ಬಸವರಾಜ ಗಂಗೋಂಡಾ, ಶಾಲೆ ವ್ಯವಸ್ಥಾಪನ ಸಮಿತಿ ಮುಖ್ಯಸ್ಥೆ ಗೀತಾಬಾಯಿ ಕೋನಾಪುರೆ, ಈರಮ್ಮಾ ಮೇಣಸೆ ಶಿಕ್ಷಕ ಶರಣಪ್ಪ ಫುಲಾರಿ ಅವರ ಕಾರ್ಯವನ್ನು ಶ್ಲಾಘಿಸಿ, ಪ್ರಶಸ್ತಿ ಲಭಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.