ಉಡುಪಿ: ಭಾರತೀಯ ರಕ್ತ ವರ್ಗಾವಣೆ ಮತ್ತು ರೋಗನಿರೋಧಕ ರಕ್ತಶಾಸ್ತ್ರ ಸಂಸ್ಥೆಯು (ಇಂಡಿಯನ್ ಸೊಸೈಟಿ ಆಫ್ ಬ್ಲಿಡ್ ಟ್ರಾನ್ಸ್‌ಫ್ಯೂಷನ್ ಆ್ಯಂಡ್ ಇಮ್ಯುನೊ ಹೆಮಟಾಲಜಿ) ತನ್ನ ಸಾಂಸ್ಥಿಕ ಪ್ರಶಸ್ತಿಯನ್ನು ರಕ್ತ ವರ್ಗಾವಣೆ ಔಷಧ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರೋಗ ನಿರೋಧಕ ರಕ್ತಶಾಸ್ತ್ರ ಮತ್ತು ರಕ್ತನಿಧಿಗೆ ನೀಡಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನ ಟ್ರಾನ್ಸಾನ್ 2019ರ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಕ್ತನಿಧಿಯ ಸಿಬಂದಿಯ ಸಮರ್ಪಣೆ ಮತ್ತು ಕಠಿನ ಪರಿಶ್ರಮ ಮತ್ತು ಸ್ವಯಂಪ್ರೇರಿತ ರಕ್ತದಾನಿಗಳ ದೊಡ್ಡ ಕೊಡುಗೆ ಆಸ್ಪತ್ರೆಯಲ್ಲಿ ರಕ್ತನಿಧಿಯ ಸೇವೆಯನ್ನು ಬಲಪಡಿಸಲು ಸಹಾಯ ಮಾಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಹೇಳಿದರು.
ವಿಭಾಗ ಮುಖ್ಯಸ್ಥರಾದ ಡಾ| ಶಮೀ ಶಾಸ್ತ್ರಿ ಅವರು ವಿಭಾಗವು ಅತ್ಯಾಧುನಿಕ ಇಮ್ಯುನೊ ಹೆಮಟಾಲಜಿ ಲ್ಯಾಬ್, ದಾನಿ ಮತ್ತು ಚಿಕಿತ್ಸಕ ಅಪೆರೆಸಿಸ್‌ನ್ನು ಸ್ಥಾಪಿಸಿದೆ, ವಿಶೇಷ ರಕ್ತ ಉತ್ಪನ್ನಗಳನ್ನು ಒದಗಿಸುತ್ತದೆ ಮತ್ತು ರೋಗಿಗಳ ರಕ್ತ ನಿರ್ವಹಣೆಯಲ್ಲಿ ತೊಡಗಿದೆ. ಈ ತಂಡವು ಈಗ ಪ್ರಾದೇಶಿಕ ಅಪರೂಪದ ದಾನಿಗಳ ನೋಂದಣಿ ಮಾಡುವುದು, ಗುರಿ ಆಧಾರಿತ ಬೃಹತ್ ವರ್ಗಾವಣೆ, ನೀತಿ ನಿಯಮಾವಳಿಗಳು ಮತ್ತು ರಕ್ತ ವರ್ಗಾವಣೆ ಮೂಲಕ ಹರಡುವ ಸೋಂಕುಗಳ ತಡೆಗಟ್ಟುವಿಕೆ ಕುರಿತು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೆಎಂಸಿ ಡೀನ್ ಡಾ| ಶರತ್ ಕೆ. ರಾವ್ ಹತ್ತು ವರ್ಷಗಳಲ್ಲಿ ರಕ್ತ ವರ್ಗಾವಣೆ ಔಷಧ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗಿವೆ ಮತ್ತು ಕೆಎಂಸಿಯಲ್ಲಿ ರಕ್ತವರ್ಗಾವಣೆ ವಿಭಾಗವು ಬೋಧನೆಯಲ್ಲಿ ಮತ್ತು ಕ್ಲಿನಿಕಲ್ ವರ್ಗಾವಣೆ ಸೇವೆಗಳನ್ನು ಒದಗಿಸುವಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಶ್ರಮಿಸುತ್ತಿದೆ ಎಂದರು. ಮಾಹೆ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ತಂಡವನ್ನು ಅಭಿನಂದಿಸಿದರು.