Advertisement

ದೇಶದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ : ನ್ಯಾ|ವೆಂಕಟಾಚಲಯ್ಯ

06:58 PM Jul 24, 2019 | Sriram |

ಕಾಸರಗೋಡು: ಕಲೆ, ಸಾಹಿತ್ಯ ಹಾಗೂ ರಂಗಭೂಮಿ ದೇಶದ ವೈವಿಧ್ಯ ಕಾಪಾಡುವ ಪ್ರಮುಖ ಅಸ್ತ್ರಗಳಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಹೇಳಿದರು.

Advertisement

ಬೆಂಗಳೂರಿನ ಎ.ಡಿ.ಎ. ರಂಗ ಮಂದಿರದಲ್ಲಿ ಅಜಿತ್‌ಕುಮಾರ್‌ ಸ್ಮಾರಕ ಸಾಂಸ್ಕೃತಿಕ ವೇದಿಕೆ ಆಯೋಜಿ ಸಿದ ರಾಷ್ಟ್ರಮಟ್ಟದ “ಅಜಿತಶ್ರೀ’ ಹಾಗೂ “ನಾಟ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಾ, ದೇಶದ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ವಾಗಿದೆ. ವೈವಿಧ್ಯತೆಯಿಂದ ಕೂಡಿರುವ ಭಾರತದ ಪರಂಪರೆಯಲ್ಲಿ ಕಲೆ, ಸಾಹಿತ್ಯ, ರಂಗಭೂಮಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಂವಿಧಾನ ರಚನಕಾರರು ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ. ಇದು ಅವಿಸ್ಮರಣೀಯ ಹಾಗೂ ಅನನ್ಯ ಎಂದರು.

2019ನೇ ಜೀವಮಾನ ಸಾಧನೆ “ಅಜಿತಶ್ರೀ’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಂಗಕರ್ಮಿ, ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಪ್ರಾಂತ್ಯ ಪ್ರಚಾರಕ ಹಾಗೂ ಯೋಗ ಗುರುವಾಗಿರುವ ಅಜಿತ್‌ಕುಮಾರ್‌ರವರ ಹೆಸರಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿ ಸ್ವೀಕರಿಸುತ್ತಿರುವ ತನ್ನ ಕೆಲಸಕ್ಕೆ ಮತ್ತಷ್ಟು ಸ್ಫೂರ್ತಿ ನೀಡಲಿದೆಯೆಂದರಲ್ಲದೆ, ಸಮಿತಿಯವರು ನೀಡಿದ 50,000 ರೂ. ಮೊತ್ತವನ್ನು ಅಶಕ್ತ ಕಲಾವಿದರಿಗೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ನೀಡಲಾಗುವುದು ಎಂದರು.

ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್‌ ಮಾತನಾಡಿ ಉನ್ನತ ಶಿಕ್ಷಣ ಪಡೆಯುವುದಕ್ಕಿಂತ ರಂಗಭೂಮಿಯಲ್ಲಿ ಶ್ರಮಿಸುವುದು ಉತ್ತಮ. ಉತ್ತಮ ಶಿಕ್ಷಣದಿಂದ ಕೇವಲ ಹಣಗಳಿಸಬಹುದು. ರಂಗಭೂಮಿ ಹಾಗೂ ಕಲೆಯಿಂದ ವೈಯಕ್ತಿಕ ಹಾಗೂ ಸಾರ್ವಜನಿಕವಾಗಿಯೂ ಘನತೆ, ಗೌರವ ಪಡೆಯಬಹುದೆಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು, ಕುಟುಂಬ ಪ್ರಬೋಧನ್‌ ಸು. ರಾಮಣ್ಣ ಅವರು ಅಜಿತ್‌ಕುಮಾರ್‌ ಅವರ ಸಂಸ್ಮರಣೆಯನ್ನು ಮಾಡುತ್ತ ಅವರಲ್ಲಿರುವ ನಿಷ್ಠೆ, ಆತ್ಮ ಸಮರ್ಪಣೆ, ನಿಶ್ಚಿತತೆ, ಪರಿಪೂರ್ಣತೆ ಬಗ್ಗೆ ಹೇಳಿದರು.

Advertisement

ಈ ಸಂದರ್ಭದಲ್ಲಿ 2019ನೇ ಸಾಲಿನ “ನಾಟ್ಯಶ್ರೀ’ ಪ್ರಶಸ್ತಿಯನ್ನು ಭರತನಾಟ್ಯ ಕಲಾವಿದೆ ಡಾ| ತುಳಸಿ ರಾಮಚಂದ್ರ, ಸಂಗೀತ ವಿದ್ವಾಂಸ ವಿದ್ವಾನ್‌ ಎಸ್‌.ಶಂಕರ್‌, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್‌ ಅವರಿಗೆ ಜೀವಮಾನ ಸಾಧನೆ ರಾಷ್ಟ್ರೀಯ “ಅಜಿತಶ್ರೀ’ ಪ್ರಶಸ್ತಿಯನ್ನು ರಂಗಭೂಮಿಯ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರಿಗೆ ನೀಡಿ ಗೌರವಿಸಲಾಯಿತು.

ಖ್ಯಾತ ಕವಿ, ಸಾಹಿತಿ, ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ, ಅಜಿತ್‌ಕುಮಾರ್‌ ಸ್ಮಾರಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ| ಬಿ.ಎಲ್‌. ಶಂಕರ್‌, ರಂಗಕರ್ಮಿ ಶ್ರೀನಿವಾಸ ಮೇಷ್ಟ್ರು ಉಪಸ್ಥಿತರಿದ್ದರು.

ಡಾ| ಬಿ.ಎಲ್‌. ಶಂಕರ್‌ ಸ್ವಾಗತಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರೂ, ರಂಗನಿರ್ದೇಶಕರೂ ಆಗಿರುವ ಡಾ| ಬಿ.ವಿ. ರಾಜಾರಾಂ ಕಲಾವಿದರನ್ನು ಪರಿಚಯಿಸಿದರು. ಸಂಸ್ಥೆಯ ಪ್ರಧಾನ ಸಂಚಾಲಕರಾದ ಮುರಳೀಧರ್‌ (ಯೋಗ ಮುರಳಿ) ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಐಶ್ವರ್ಯ ನಿತ್ಯಾನಂದ ಅವರಿಂದ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next