Advertisement

ಮಾ. 10-12: ಉಡುಪಿಯಲ್ಲಿ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌

10:47 PM Mar 04, 2023 | Team Udayavani |

ಉಡುಪಿ: ಆ್ಯತ್ಲೆಟಿಕ್‌ ಫೆಡರೇಶನ್‌ ಆಫ್‌ ಇಂಡಿಯಾ, ಕರ್ನಾಟಕ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಹಾಗೂ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಆಶ್ರಯದಲ್ಲಿ ಹಾಗೂ ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಾ. 10ರಿಂದ 12ರ ವರೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 18ನೇ ರಾಷ್ಟ್ರೀಯ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌-2023 ನಡೆಯಲಿದೆ ಎಂದು ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಈ ಕ್ರೀಡಾಕೂಟದಲ್ಲಿ ದೇಶದ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳಿಂದ 1,200ರಷ್ಟು ಕ್ರೀಡಾಪಟುಗಳು, 25 ತಾಂತ್ರಿಕ ಅಧಿಕಾರಿಗಳು, 125 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. 100 ಸ್ವಯಂಸೇವಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಮಾ. 10ರ ಸಂಜೆ ಜೋಡುಕಟ್ಟೆಯಿಂದ ಕ್ರೀಡಾಜ್ಯೋತಿ ಸಹಿತ ಬೃಹತ್‌ ಮೆರವಣಿಗೆ ನಡೆಯಲಿದೆ. 40 ವಿಭಾಗಗಳಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ ಉಡುಪಿಯಲ್ಲಿ ನಡೆಯುತ್ತಿರುವುದು ಇದೇ ಮೊದಲು. 80 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಕೂಟ ನಡೆಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಗತ್ಯ ಪರಿಕರಗಳನ್ನು ಬೆಂಗಳೂರಿನಿಂದ ತರಿಸಲು ಇಲಾಖೆಯ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಶಾಸಕರು ಹೇಳಿದರು.

ಉಡುಪಿಯ ಮೂವರು
ರಾಜ್ಯ ತಂಡದ ಆಯ್ಕೆ ನಡೆದಿದ್ದು, ಕರ್ನಾಟಕದ 31 ಕ್ರೀಡಾಪಟುಗಳು ಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಧ್ರುವ ಬಲ್ಲಾಳ್‌, ಮಾಧುರ್ಯ ಹಾಗೂ ಆದಿಲ್‌ ಸೇರಿದ್ದಾರೆ. ಎ. 25 ರಿಂದ ಎ. 30ರ ವರೆಗೆ ಉಜ್ಬೆಕಿಸ್ಥಾನದಲ್ಲಿ ನಡೆಯುವ 5ನೇ ಏಷ್ಯನ್‌ ಚಾಂಪಿಯನ್‌ಶಿಪ್‌ಗೆ ಈ ಕ್ರೀಡಾಕೂಟದಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದೆ ಎಂದರು.

ರಾಜ್ಯ ಆ್ಯತ್ಲೆಟಿಕ್‌ ಸಂಸ್ಥೆ ಕಾರ್ಯದರ್ಶಿ ಎ. ರಾಜವೇಲು ಮಾತನಾಡಿ, ಆಧುನಿಕ ನಿಯಮಾನುಸಾರ ಕ್ರೀಡಾಕೂಟ ನಡೆಯಲಿದೆ ಎಂದರು.

Advertisement

ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಗೌ. ಸಲಹೆಗಾರ ಅಶೋಕ್‌ ಅಡ್ಯಂತಾಯ, ಅಧ್ಯಕ್ಷ ಡಾ| ಕೆಂಪರಾಜ್‌ ಎಚ್‌.ಬಿ., ಕಾರ್ಯದರ್ಶಿ ದಿನೇಶ್‌ ಕುಮಾರ್‌ ಎ., ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ, ಸದಸ್ಯ ಲಚ್ಚೇಂದ್ರ, ತಾಂತ್ರಿಕ ವಿಭಾಗದ ಡಾ| ರಾಮಚಂದ್ರ ಪಾಟ್ಕರ್‌, ನಿಟ್ಟೆ ವಿದ್ಯಾಸಂಸ್ಥೆ ನಿರ್ದೇಶಕ ಯೋಗೀಶ್‌ ಹೆಗ್ಡೆ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next