ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,58,089 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ವರದಿ ಮಾಡಿದೆ. ರವಿವಾರದ 2.71 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿತ್ತು.
24-ಗಂಟೆಗಳ ಅವಧಿಯಲ್ಲಿ 385 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ ದೇಶದ ಪಾಸಿಟಿವಿಟಿ ದರ 19.65% ರಷ್ಟಿದೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಸದ್ಯ 16,56,341 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 1,51,740 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರಿಂದ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,52,37,461ಕ್ಕೆ ಏರಿಕೆಯಾಗಿದೆ. ದೇಶದ ಚೇತರಿಕೆ ದರ 94.27 ಇದೆ.
ಇದನ್ನೂ ಓದಿ:ಉತ್ತರಾಖಂಡ: ಚುನಾವಣೆಗೂ ಮೊದಲು ಸಚಿವನನ್ನೇ ಪಕ್ಷದಿಂದ ಹೊರಹಾಕಿದ ಬಿಜೆಪಿ
ಲಸಿಕೆಗೆ ಒಂದು ವರ್ಷ: 365 ದಿನ, 157 ಕೋಟಿ ಡೋಸ್ ಲಸಿಕೆ, ಶೇ.70ರಷ್ಟು ವಯಸ್ಕ ಜನಸಂಖ್ಯೆಗೆ ಪೂರ್ಣ ಲಸಿಕೆ… ಇದು ಲಸಿಕೆ ಪ್ರಕ್ರಿಯೆಯಲ್ಲಿ ಭಾರತದ ಸಾಧನೆ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2021ರ ಜ.16ರಂದು ದೇಶಾದ್ಯಂತ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕೆಲಸ ಆರಂಭವಾಯಿತು. ಈ ಒಂದು ವರ್ಷದಲ್ಲಿ ಒಟ್ಟು 157 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದ್ದು, ಕಡಿಮೆ ಸಮಯದಲ್ಲೇ ಈ ಪ್ರಮಾಣದ ಮಂದಿಗೆ ಲಸಿಕೆ ನೀಡಿದ ದಾಖಲೆಯನ್ನೂ ಭಾರತ ನಿರ್ಮಾಣ ಮಾಡಿದೆ. ಒಟ್ಟಾರೆ, ಶೇ.70ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ಅಂದರೆ, ಅರ್ಹ ಜನಸಂಖ್ಯೆಯ 65 ಕೋಟಿ ಮಂದಿಗೆ ಲಸಿಕೆ ಸಿಕ್ಕಿದೆ.