ಹಾಸನ: “ರಾಷ್ಟ್ರ ರಾಜಕಾರಣಕ್ಕೆ ನಾನು ಹೋಗುವುದಿಲ್ಲ. ಕರ್ನಾಟಕವೇ ನನ್ನ ಮೊದಲ ಆದ್ಯತೆ’ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
“ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣ ಪ್ರವೇಶಿಸುವರು. ಅವರು ರಾಷ್ಟ್ರ ರಾಜಕಾರಣಕ್ಕೆ
ಹೋಗಬೇಕೆಂಬುದು ನನ್ನ ಇಚ್ಛೆಯೂ ಆಗಿದೆ’ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹರದನಹಳ್ಳಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
“ದೇವೇಗೌಡರು ಯಾವ ಸಂದರ್ಭ ಉಲ್ಲೇಖೀಸಿ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವೆ ಎಂದು ಹೇಳಿದ್ದಾರೋ ಗೊತ್ತಿಲ್ಲ.ಆದರೆ ನನಗೆ ರಾಷ್ಟ್ರ ರಾಜಕಾರಣ ಇಷ್ಟವಿಲ್ಲ. ರಾಷ್ಟ್ರ ರಾಜಕಾರಣದ ಬಗ್ಗೆ ಕನಸು ಮನಸ್ಸಿನಲ್ಲೂ ನಾನು ಚಿಂತಿಸಿಲ್ಲ. ದೇವೇಗೌಡರು ಮುಖ್ಯಮಂತ್ರಿ ಸ್ಥಾನ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗಿ ಅನುಭವಿಸಿದ ನೋವು ಕಂಡಿದ್ದೇನೆ. ಹಾಗಾಗಿ ರಾಷ್ಟ್ರ ರಾಜಕಾರಣಕ್ಕೆ ಹೋಗಲಾರೆ’ ಎಂದರು.