ಬೆಳ್ಮಣ್: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ಹೆಸರು ಇಡಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ ‘ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ’ ಎಂದು ನಾಮಫಲಕ ಹಾಕಲಾಗಿದೆ. ಈ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
“ಇದು ಖಾಸಗಿಯವರು ಹಾಕಿದ ನಾಮಫಲಕ. ಪಂಚಾಯತ್ ನಲ್ಲಿ ಈ ಹೆಸರಿಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಂಚಾಯತ್ ಈ ನಾಮಫಲಕ ಹಾಕಿಲ್ಲ” ಎನ್ನುತ್ತವೆ ಬೋಳ ಪಂಚಾಯತ್ ಮೂಲಗಳು.
ಇದನ್ನೂ ಓದಿ:ಇಬ್ರಾಹಿಂಗೆ ಮಾನ- ಮರ್ಯಾದೆ ಏನೂ ಇಲ್ಲ. ಜೆಡಿಎಸ್ ನಲ್ಲಿ ಸ್ವಾತಂತ್ರ್ಯವಿಲ್ಲ: ಸಿದ್ದರಾಮಯ್ಯ
ಈ ಬಗ್ಗೆ ಉದಯವಾಣಿ ವೆಬ್ ಸೈಟ್ ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಶಾಸಕ, ಸಚಿವ ಸುನೀಲ್ ಕುಮಾರ್, “ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ. ಖಾಸಗಿಯವರು ಹಾಕಿದ್ದಾರೆ. ಈ ಬಗ್ಗೆ ಪಂಚಾಯತ್ ನವರು ಪರಿಶೀಲಿಸಿ ಅಧಿಕೃತ ವಸ್ತುಸ್ಥಿತಿಯನ್ನು ಸಾರ್ವಜನಿಕರ ಮುಂದಿಡುತ್ತಾರೆ” ಎಂದರು.
ತೆರವು: ಘಟನೆ ವಿವಾದ ರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಗ್ರಾಮ ಪಂಚಾಯತ್ ನಾಮಫಲಕ ತೆರವು ಮಾಡಿದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಎಸ್ ಐ ತೇಜಸ್ವಿ ಭೇಟಿ ನೀಡಿದ್ದಾರೆ.