ಲಂಡನ್: ಬಲಗಾಲಿನ ಮೀನಖಂಡದ ಸ್ನಾಯು ಸೆಳೆತದಿಂದಾಗಿ ಆಸ್ಟ್ರೇಲಿಯದ ಸ್ಪಿನ್ನರ್ ನಥನ್ ಲಿಯಾನ್ ಆ್ಯಶಸ್ ಸರಣಿಯ ಉಳಿದ ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ದ್ವಿತೀಯ ದಿನ ಕ್ಷೇತ್ರರಕ್ಷಣೆ ಮಾಡುವಾಗ ಅವರು ಈ ಸಮಸ್ಯೆಗೆ ಸಿಲುಕಿದ್ದರು.
ಈ ಘಟನೆಯ ಬಳಿಕ ಲಿಯಾನ್ ಬೌಲಿಂಗ್ ನಡೆಸಲಿಲ್ಲ. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಂಟುತ್ತಲೇ ಬ್ಯಾಟಿಂಗ್‌ಗೆ ಇಳಿದು ಮಿಚೆಲ್ ಸ್ಟಾರ್ಕ್ ಜತೆ ಅಂತಿಮ ವಿಕೆಟಿಗೆ 15 ರನ್ ಪೇರಿಸಿದ್ದರು.
ಇದು ನಥನ್ ಲಿಯಾನ್ ಅವರ ಸತತ 100ನೇ ಟೆಸ್ಟ್ ಆಗಿತ್ತು. ಅವರು ನಿರಂತರ 100 ಟೆಸ್ಟ್ ಪೂರೈಸಿದ ವಿಶ್ವದ 6ನೇ ಆಟಗಾರ ಹಾಗೂ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಥನ್ ಲಿಯಾನ್ ಸ್ಥಾನಕ್ಕೆ ಮ್ಯಾಟ್ ರೆನ್‌ಶಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಗುರುವಾರ ಹೇಡಿಂಗ್ಲೆಯಲ್ಲಿ ಆರಂಭವಾಗಲಿರುವ ತೃತೀಯ ಟೆಸ್ಟ್ ನಲ್ಲಿ ಆಫ್ಸ್ಪಿನ್ನರ್ ಟಾಡ್ ಮರ್ಫಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
22 ವರ್ಷದ ಟಾಡ್ ಮರ್ಫಿ ಈ ವರ್ಷಾರಂಭದ ಭಾರತ ಪ್ರವಾಸದ ವೇಳೆ ಟೆಸ್ಟ್ ಪದಾರ್ಪಣೆ ಮಾಡಿದ್ದರು. ನಾಗ್ಪುರದ ಚೊಚ್ಚಲ ಟೆಸ್ಟ್‌ನಲ್ಲೇ 7 ವಿಕೆಟ್ ಉರುಳಿಸಿ ಮಿಂಚಿದ್ದರು. ಸರಣಿಯ 4 ಟೆಸ್ಟ್‌ಗಳಿಂದ 14 ವಿಕೆಟ್ ಕೆಡವಿದ ಸಾಧನೆ ಇವರದಾಗಿತ್ತು.