Advertisement

ನೀಟ್ ನೂರರಲ್ಲಿ ರಾಜ್ಯದ ಮೂವರು

02:01 AM Jun 06, 2019 | Sriram |

ಬೆಂಗಳೂರು: ವೈದ್ಯಕೀಯ ಹಾಗೂ ದಂತವೈದ್ಯಕೀಯ ಸೀಟುಗಳ ಹಂಚಿಕೆಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ(ನೀಟ್) ಫ‌ಲಿತಾಂಶದಲ್ಲಿ ಕರ್ನಾಟಕದ ಮೂವರು ವಿದ್ಯಾರ್ಥಿಗಳು ಅಗ್ರ 100 ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಹಾಸನದ ಮಾವಿನಕೆರೆ ನವೋದಯ ವಿದ್ಯಾಶಾಲೆಯ ಡಿ.ಆರ್‌.ಪಣೀಂದ್ರ 686 ಅಂಕ ಪಡೆಯುವ ಮೂಲಕ 36ನೇ ರ್‍ಯಾಂಕ್‌ ಪಡೆದು, ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಬೆಂಗಳೂರಿನ ಪಿ.ಮಹೇಶ್‌ ಆನಂದ್‌ 685 ಅಂಕ ಪಡೆಯುವ ಮೂಲಕ 43ನೇ ರ್‍ಯಾಂಕ್‌ ಹಾಗೂ ಪ್ರಗ್ಯಾ ಮಿತ್ರಾ 680 ಅಂಕ ಪಡೆಯುವ ಮೂಲಕ 99ನೇ ರ್‍ಯಾಂಕ್‌ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಮೇ 5 ಮತ್ತು ಮೇ 20ರಂದು ನಡೆದ ನೀಟ್‌ಗೆ ರಾಜ್ಯದ 1,15,931 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಅದರಲ್ಲಿ 1,02,735 ವಿದ್ಯಾರ್ಥಿಗಳು ಹಾಜರಾಗಿದ್ದು, 13,196 ವಿದ್ಯಾರ್ಥಿಗಳು ನೀಟ್ ಬರೆದಿರಲಿಲ್ಲ.

ಒಟ್ಟಾರೆಯಾಗಿ ಶೇ.63.25ರಷ್ಟು ಫ‌ಲಿತಾಂಶವನ್ನು ಕರ್ನಾಟಕದ ವಿದ್ಯಾರ್ಥಿಗಳು ಪಡೆದಿದ್ದಾರೆ. ಅಂದರೆ, ಪರೀಕ್ಷೆ ಬರೆದ 1.15 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 64,982 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. 2018ರಲ್ಲಿ ರಾಜ್ಯದ ಶೇ.63.51ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ಭಾರಿ ಫ‌ಲಿತಾಂಶವು ಶೇ.0.26ರಷ್ಟು ಕಡಿಮೆಯಾಗಿದೆ.

ಮೇ 5ರಂದು ಹಂಪಿ ಎಕ್ಸ್‌ಪ್ರೆಸ್‌ ರೈಲು ವಿಳಂಬ ಹಾಗೂ ಚುನಾವಣೆಗಾಗಿ ಪರೀಕ್ಷಾ ಕೇಂದ್ರ ಬದಲಾಯಿಸಿದ್ದರಿಂದ ಕೆಲವು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ, ರೈಲು ವಿಳಂಬದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಎಂಎಚ್ಆರ್‌ಡಿ ಮೇ 20ರಂದು ಮರು ಪರೀಕ್ಷೆ ಮಾಡಿತ್ತು. ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.

Advertisement

ನವೋದಯ ಶಾಲೆಯ ವಿದ್ಯಾರ್ಥಿ: ದೇಶಕ್ಕೆ 36ನೇ ರ್‍ಯಾಂಕ್‌ ಮತ್ತು ರಾಜ್ಯಕ್ಕೆ ಮೊದಲಿಗರಾಗಿರುವ ಫ‌ಣೀಂದ್ರ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ಜವಾಹರ್‌ ನವೋದಯ ಶಾಲೆಯ ವಿದ್ಯಾರ್ಥಿ. ಡಿ.ಆರ್‌ ಫ‌ಣೀಂದ್ರ ಅವರು ಅರಕಲಗೂಡು ತಾಲೂಕು ರಾಮನಾಥಪುರದ ಡಿ.ಬಿ. ರಮೇಶ್‌ ಹಾಗೂ ಮಧುರ ದಂಪತಿಯ ಪುತ್ರ. ಪುಣೆಯ ನವೋದಯ ಶಾಲೆಯಲ್ಲಿ ನೀಟ್ಗಾಗಿ ತರಬೇತಿ ಪಡೆದಿದ್ದರು. ಜವಾಹರ್‌ ನವೋದಯದ ವಿದ್ಯಾಲಯದಲ್ಲಿ ಓದಿದ್ದು, 1ರಿಂದ 10ನೇ ತರಗತಿ ವರೆಗೂ ಕನ್ನಡ ಮೊದಲ ಭಾಷೆಯಾಗಿಯೇ ಕಲಿತಿದ್ದೇನೆ. ದಕ್ಷಿಣ ಫೌಂಡೇಷನ್‌ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅವರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದಿದ್ದೇನೆ ಎಂದು ಫ‌ಣೀಂದ್ರ ಹೇಳಿದ್ದಾರೆ.

ತಂದೆ ಶಾಲಾ ಶಿಕ್ಷಕರಾಗಿದ್ದು, ತಾಯಿ ಸರ್ಕಾರಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾಲಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
– ಡಿ.ಆರ್‌.ಫ‌‌ಣೀಂದ್ರ, ನೀಟ್ 36ನೇ ರ್‍ಯಾಂಕ್‌

ರಾಜಸ್ಥಾನದ ನಳಿನ್‌ ಖಂಡೇಲ್ವಾಲ್ ಪ್ರಥಮ
ನವದೆಹಲಿ:
ಕಳೆದ ಮೇ 5 ಹಾಗೂ 20ರಂದು ನಡೆದಿದ್ದ ನೀಟ್ ಪರೀಕ್ಷೆಯ (ರಾಷ್ಟ್ರಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶ ಪರೀಕ್ಷೆ) ಫ‌ಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ರಾಜಸ್ಥಾನದ ನಳಿನ್‌ ಖಂಡೇಲ್ವಾಲ್ 701 ಅಂಕ ಗಳಿಸಿ (ಗರಿಷ್ಠ 720 ಅಂಕ) ದೇಶಕ್ಕೆ ಪ್ರಥಮ ಎನಿಸಿಕೊಂಡಿದ್ದಾನೆ. ದೆಹಲಿಯ ಭಾವಿಕ್‌ ಬನ್ಸಾಲ್, ಉತ್ತರ ಪ್ರದೇಶದ ಅಕ್ಷತ್‌ ಕೌಶಿಕ್‌ (ಇಬ್ಬರಿಗೂ 700 ಅಂಕ) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. 625 ಅಂಕ ಗಳಿಸಿರುವ ತೆಲಂಗಾಣದ ಮಾಧುರಿ ರೆಡ್ಡಿ 7ನೇ ಸ್ಥಾನ ಪಡೆದಿದ್ದಾರೆ. ಇನ್ನು, ನೀಟ್ ಪರೀಕ್ಷೆ ತೆಗೆದುಕೊಂಡಿದ್ದ ವಿಕಲ ಚೇತನರಲ್ಲಿ ರಾಜಸ್ಥಾನದ ಭೇರಾರಾಮ್‌ ಮೊದಲಿಗರಾಗಿದ್ದಾರೆ. ಒಟ್ಟು 720 ಅಂಕಗಳಿಗೆ ಅವರು 604 ಅಂಕ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next