ಆತ ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಸೂಪರ್ ಸ್ಟಾರ್ ಹೀರೋ. ಮಾಡಿದ ಸಿನಿಮಾವೆಲ್ಲ ಬ್ಲಾಕ್ ಬಸ್ಟರ್ ಆಗಿದ್ದರಿಂದ, ಸಹಜವಾಗಿಯೇ ಇವನ ಜೊತೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ತುದಿಗಾಲಿನಲ್ಲಿರುತ್ತಾರೆ. ಆದರೆ ಇವನೋ ಹೇಳಿ-ಕೇಳಿ ತಿಕ್ಕಲು ಸ್ವಭಾವದವನು. ಸ್ವಲ್ಪ ಹೆಚ್ಚು- ಕಡಿಮೆಯಾದರೂ ತನ್ನೊಂದಿಗೆ ಸಿನಿಮಾ ಮಾಡುವ ನಿರ್ಮಾಪಕರು, ನಿರ್ದೇಶಕರನ್ನು ತನ್ನ ಕು(ಕಪಿ)ಚೇಷ್ಟೆಯಿಂದ ಹೈರಾಣಾಗಿಸದೆ ಬಿಡಲಾರ. ಮುಂದೆ ಎಲ್ಲರಿಂದ ಹೊಗಳಿಸಿಕೊಳ್ಳುವ, ಹಿಂದಿನಿಂದ ಹಿಡಿ ಶಾಪ ಹಾಕಿಸಿಕೊಳ್ಳುವ ಇಂಥ ಸೂಪರ್ ಸ್ಟಾರ್ ಹೀರೋ ಒಬ್ಬ ಕುರುಡಿ ದೆವ್ವದ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವನ ಪಾಡು ಹೇಗಿರಬಹುದು? ಇಂಥದ್ದೊಂದು ಕಥೆಯನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ನಟ ಭಯಂಕರ’.
ಇನ್ನು ಸಿನಿಮಾದ ಟೈಟಲ್ಲೇ ಹೇಳುವಂತೆ ಒಬ್ಬ ಸೂಪರ್ ಸ್ಟಾರ್ “ನಟ’ ಮತ್ತು “ಭಯಂಕರ’ ದೆವ್ವದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಕನ್ನಡದಲ್ಲಿ ಸ್ವಲ್ಪ ವಿರಳ ಎಂದೇ ಹೇಳಲಾಗುವ ಹಾರರ್-ಕಾಮಿಡಿ ಶೈಲಿಯಲ್ಲಿ ಇಡೀ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಹಾರರ್-ಕಾಮಿಡಿ ಜೊತೆಗೆ ಲವ್, ರೊಮ್ಯಾಂಟಿಕ್ ಸಾಂಗ್ಸ್, ಫೈಟ್ಸ್ ಹೀಗೆ ಒಂದಷ್ಟು ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಸೇರಿಸಿ ಕಂಪ್ಲೀಟ್ ಪ್ಯಾಕೇಜ್ ಸಿನಿಮಾ ಕೊಡುವ ಪ್ರಯತ್ನ ಮಾಡಿದ್ದಾರೆ. ನಟ ಕಂ ನಿರ್ದೇಶಕ ಪ್ರಥಮ್. ಸಿನಿಮಾದ ಕಥೆ ಎಳೆ ಚೆನ್ನಾಗಿದ್ದರೂ, ಚಿತ್ರಕಥೆ ಮತ್ತು ಕೆಲ ಅನಗತ್ಯ ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ, “ನಟ ಭಯಂಕರ’ನ ಓಟ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದ್ದವು.
ಇದನ್ನೂ ಓದಿ:ಮಡಿಕೇರಿಯ ರಾಜಾಸೀಟ್‌ನಲ್ಲಿ ಕಣ್ಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ
ಇನ್ನು “ನಟ ಭಯಂಕರ’ ಸಿನಿಮಾದಲ್ಲಿ ಪ್ರಥಮ್ ಅವರದ್ದು ಡಬಲ್ ರೋಲ್ ಎನ್ನಬಹುದು. ತೆರೆಮುಂದೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ಎರಡೂ ಪಾತ್ರವನ್ನು ಪ್ರಥಮ್ ನಿಭಾಯಿಸಿದ್ದಾರೆ. ಎರಡರಲ್ಲೂ ಪ್ರಥಮ್ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ.
ಇನ್ನು ನಾಯಕಿಯರಾದ ನಿಹಾರಿಕಾ, ಸುಶ್ಮಿತಾ ಜೋಶಿ ತಮ್ಮ ಪಾತ್ರಗಳಿಂದ ಇಷ್ಟವಾಗುತ್ತಾರೆ. ಉಳಿದಂತೆ ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್ ಅಲ್ಲಲ್ಲಿ ನಗುವಿನ ಕಚಗುಳಿ ಇಟ್ಟರೆ, ಸಾಯಿಕುಮಾರ್ ಮತ್ತು ಶೋಭರಾಜ್ ತಮ್ಮ ವಿಭಿನ್ನ ಮ್ಯಾನರಿಸಂನಿಂದ ಗಮನ ಸೆಳೆಯುತ್ತಾರೆ.
ಜಿ.ಎಸ್.ಕಾರ್ತಿಕ ಸುಧನ್