ವಾಷಿಂಗ್ಟನ್: ಸೂರ್ಯನ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಈಗ ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಗಗನ ನೌಕೆಯನ್ನು ಉಡಾಯಿಸಿವೆ. ಜಗತ್ತಿಗೆ ಗೋಚರಿಸದೇ ಇರುವ ಸೂರ್ಯನ ಧ್ರುವಗಳ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಈ ಗಗನ ನೌಕೆಯನ್ನು ಹಾರಿಬಿಡಲಾಗಿದೆ. ವಿಶ್ವದಲ್ಲಿಯೇ ಇಂಥದ್ದು ಮೊದಲ ಪ್ರಯತ್ನ ಎಂದು ನಾಸಾ ಮತ್ತು ಇಎಸ್‌ಎ ಹೇಳಿದೆ.
1.5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಯೋಜನೆ ಇದಾಗಿದ್ದು, ಫ್ಲೋರಿಡಾದಲ್ಲಿರುವ ಕೇಪ್ ಕೆನೆವರಾಲ್ ಏರ್‌ಫೋರ್ಸ್ ಸ್ಟೇಷನ್‌ನಿಂದ ಅದನ್ನು ಉಡಾಯಿಸಲಾಗಿದೆ. ಉಡಾವಣೆಗೊಂಡ ಕೆಲವೇ ಕ್ಷಣಗಳ ಬಳಿಕ ಜರ್ಮನಿಯಲ್ಲಿರುವ ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಕೇಂದ್ರಕ್ಕೆ (ಇಎಸ್‌ಎ) ಮೊದಲ ಸಿಗ್ನಲ್‌ಗಳನ್ನು ಕಳುಹಿಸಿದೆ.
ಜಗತ್ತಿಗೆ ಇನ್ನೂ ಅರಿವಿಗೆ ಬಾರದೇ ಇರುವ ಸೂರ್ಯನ ಧ್ರುವಗಳ ಬಗ್ಗೆ ಅಧ್ಯಯನ ನಡೆಸುವುದು ಇದರ ಉದ್ದೇಶ. ಉಡಾವಣೆಯ ಮೊದಲ 2 ದಿನಗಳಲ್ಲಿ ಸೌರ ನೌಕೆ ಭೂಮಿ ಹಾಗೂ ಸೂರ್ಯನ ನಡುವೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಮಾಹಿತಿ ಪಡೆದು ಕೊಳ್ಳುವ ಬಗ್ಗೆ ಹಲವು ಆ್ಯಂಟೆನಾಗಳನ್ನು ನಿಯೋಜಿಸಲಿದೆ.
ಸೂರ್ಯನ ಕೆಲ ಭಾಗಗಳಿಗೆ ಪ್ರವೇಶ ಮಾಡಿ ಅಧ್ಯಯನ ನಡೆಸುವ ಪ್ರಕ್ರಿಯೆ ಎರಡು ವರ್ಷಗಳ ಕಾಲ ನಡೆಯಲಿದೆ. ಒಟ್ಟು ಎರಡು ಹಂತಗಳಲ್ಲಿ ಅಧ್ಯಯನ ನಡೆಸಲಿದ್ದು, ಮೊದಲ ಹಂತದಲ್ಲಿ ಗಗನ ನೌಕೆಯ ಸುತ್ತ ಇರುವ ಸೌರ ಪರಿಸರದ ಬಗ್ಗೆ ಅಧ್ಯಯನ ನಡೆಸಲಿದ್ದರೆ, ರಿಮೋಟ್ ಸೆನ್ಸಿಂಗ್ ವ್ಯವಸ್ಥೆಗಳು ದೂರದಿಂದಲೇ ಸೂರ್ಯನ ಚಿತ್ರ, ಮತ್ತು ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಿವೆ. ಅವುಗಳ ಅಧ್ಯಯನದಿಂದ ಭಾಸ್ಕರ ಒಳಾವರಣದಲ್ಲಿ ಏನಿದೆ ಎಂಬ ವಿಚಾರ ಗೊತ್ತಾಗಲಿದೆ.