ವಾಷಿಂಗ್ಟನ್: ನಾಸಾ ಬಹ್ಯಾಕಾಶ ಸಂಸ್ಥೆಯು ಹಾರಿಬಿಟ್ಟಿರುವ ಗ್ರಹ ಪತ್ತೆ ಉಪಗ್ರಹ ‘ಟೆಸ್’ (ಟ್ರಾನ್ಸಿಟಿಂಗ್ ಎಕ್ಸ್‌ಪ್ಲೊನೆಟ್ಸ್ ಸರ್ವೇ ಸೆಟಲೈಟ್) ಸುಮಾರು 53 ಜ್ಯೋತಿರ್ ವರ್ಷಗಳ ದೂರದಲ್ಲಿ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಭೂಮಿ ಗಾತ್ರದ ಆಕಾಶ ಕಾಯವೊಂದನ್ನು ಪತ್ತೆಹಚ್ಚಿದೆ. ಮಾತ್ರವಲ್ಲದೇ ಇದೇ ಮಂಡಲ ವ್ಯವಸ್ಥೆಯಲ್ಲಿ ಬಿಸಿಯಾಗಿರುವ ಉಪ-ನೆಫ್ಚೂನ್ ಗಾತ್ರದ ವಿಶ್ವವೊಂದನ್ನೂ ಸಹ ಟೆಸ್ ಪತ್ತೆಮಾಡಿದೆ.
ಒಂದು ವರ್ಷದ ಹಿಂದೆ ಹಾರಿಬಿಟ್ಟಿರುವ ಈ ಗ್ರಹ ಪತ್ತೆ ಉಪಗ್ರಹವು ಇಷ್ಟು ಕಡಿಮೆ ಕಾಲಾವಧಿಯಲ್ಲಿ ನೂತನ ಗ್ರಹಗಳ ಪತ್ತೆಯಲ್ಲಿ ಒಂದು ಗೇಮ್ ಚೇಂಜರ್ ಆಗಿ ರೂಪುಗೊಂಡಿರುವುದಕ್ಕೆ ನಾಸಾ ವಿಜ್ಞಾನಿಗಳು ಸಂತಸಗೊಂಡಿದ್ದಾರೆ. ಈ ಉಪಗ್ರಹವು ಆಕಾಶದ ಸರ್ವೇಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದೀಗ ವಿಜ್ಞಾನಿಗಳು ಭೂಮಿಯಲ್ಲಿ ಸ್ಥಾಪಿಸಿರುವ ದೈತ್ಯ ದೂರದರ್ಶಕಗಳನ್ನು ಬಳಸಿಕೊಂಡು ಈ ಉಪಗ್ರಹದೊಂದಿಗೆ ಸಂವಹನ ಸಾಧಿಸಿ ಈಗ ಪತ್ತೆಯಾಗಿರುವ ದೈತ್ಯ ಆಕಾಶಕಾಯಗಳ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಚಿಲಿಯಲ್ಲಿ ಸ್ಥಾಪಿಸಲಾಗಿರುವ ಮೆಗೆಲನ್ II ಟೆಲಿಸ್ಕೋಪ್ ನಲ್ಲಿರುವ ಗ್ರಹ ಪತ್ತೆ ಸ್ಪೆಕ್ಟ್ರೋಗ್ರಾಫ್ ಈ ವಿಚಾರದಲ್ಲಿ ವಿಜ್ಞಾನಿಗಳಿಗೆ ಇನ್ನಷ್ಟು ಮಾಹಿತಿ ನೀಡಬಹುದಾಗಿರುವ ಉಪಕರಣಗಳಲ್ಲಿ ಒಂದಾಗಿದೆ.
ಈ ಅಜ್ಞಾತ ಬೃಹತ್ ಆಕಾಶ ಕಾಯದ ಹೊರ ಮೈ ಸಂರಚನೆಯ ಕುರಿತಾಗಿ ತಿಳಿದುಕೊಳ್ಳದೇ ಅಂತಹ ಗ್ರಹಗಳ ಸಾಂದ್ರತೆ ಮತ್ತು ರಾಸಾಯನಿಕ ಸಂರಚನೆಗಳನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗಿರುತ್ತದೆ. ಇನ್ನು ಇದೇ ಉಪಗ್ರಹ ಪತ್ತೆ ಮಾಡಿರುವ ಸಬ್-ನೆಫ್ಚೂನ್ ಹೆಚ್.ಡಿ. 21749ಬಿ ಇದುವರೆಗೆ ಟೆಸ್ ಪತ್ತೆ ಮಾಡಿರುವ ಆಕಾಶಕಾಯಗಳಲ್ಲೇ ತನ್ನ ಕಕ್ಷೆ ಪರಿಭ್ರಮಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾಯವಾಗಿದೆ.
ಇದಕ್ಕೆ ತನ್ನ ಕಕ್ಷೆಗೆ ಒಂದು ಸುತ್ತು ಬರಲು 36 ದಿನಗಳು ಬೇಕಾಗುತ್ತದೆ. ಇದು ಪರಿಭ್ರಮಿಸುತ್ತಿರುವ ನಕ್ಷತ್ರ ನಮ್ಮ ಸೂರ್ಯನಿಗಿಂತ 80 ಪ್ರತಿಶತ ಹೆಚ್ಚು ದೊಡ್ಡದಾಗಿದೆ. ಮತ್ತು ಇದು ನಮ್ಮ ಭೂಮಿಯಿಂದ 56 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿದೆ. ಹೆಚ್.ಡಿ. 21749ಬಿ ಭೂಮಿಗಿಂತ 23 ಪಟ್ಟು ದೊಡ್ಡದಾಗಿದೆ ಮತ್ತಿದರ ಪರಿಧಿ ಭೂಮಿಯ 2.7 ಪಟ್ಟು ಹೆಚ್ಚಾಗಿದೆ.