ಗಾಂಧಿನಗರದ ಪ್ರಮುಖ ಥಿಯೇಟರ್‌ಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವ ಹೆಸರು ಕೆಂಪೇಗೌಡ ರಸ್ತೆಯಲ್ಲಿರುವ (ಕೆ.ಜಿ ರಸ್ತೆ) ಸಂತೋಷ್ ಮತ್ತು ನರ್ತಕಿ ಥಿಯೇಟರ್‌ಗಳದ್ದು.
ಸುಮಾರು ನಾಲ್ಕುವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್ ಸ್ಟಾರ್ ಸಿನಿಮಾಗಳನ್ನು ತೆರೆಗೆ ತಂದ, ಹಲವು ದಾಖಲೆಗಳನ್ನು ಬರೆದ ಈ ಎರಡೂ ಥಿಯೇಟರ್ ಗಳೂ ಕೋವಿಡ್ ಬಳಿಕ ಕೆಲ ಕಾನೂನು ಮತ್ತುತಾಂತ್ರಿಕ ಕಾರಣಗಳಿಂದ ತಮ್ಮ ಪ್ರದರ್ಶನವನ್ನು ನಿಲ್ಲಿಸಿದ್ದವು.
ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್ ನಟರು, ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರ ಫೇವರೆಟ್ ಥಿಯೇಟರ್‌ಗಳು ಎಂದೆನಿಸಿಕೊಂಡಿದ್ದ ಸಂತೋಷ್ ಮತ್ತು ನರ್ತಕಿ ಥಿಯೇಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಸಿನಿಮಾ ಪ್ರದರ್ಶನಗಳು ಸ್ಥಗಿತಗೊಂಡಿದ್ದು, ಸಹಜವಾಗಿಯೇ ಚಿತ್ರರಂಗದ ಮಂದಿ ಮತ್ತು ಸಿನಿಪ್ರಿಯರಿಗೂ ಬೇಸರವನ್ನು ತರಿಸಿತ್ತು. ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಮತ್ತು ನರ್ತಕಿ ಥಿಯೇಟರ್‌ಗಳಲ್ಲಿ ಮತ್ತೆ ಸಿನಿಮಾಗಳ ಪ್ರದರ್ಶನ ಆರಂಭವಾಗಿ, ಹಿಂದಿನಂತೆ ರಂಗು ಪಡೆದುಕೊಳ್ಳುತ್ತದೆಯಾ? ಅಥವಾ ಇತರ ಥಿಯೇಟರ್‌ಗಳಂತೆ ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿದು ಚಿತ್ರರಂಗದ ಇತಿಹಾಸದ ಪುಟ ಸೇರಲಿವೆಯಾ? ಎಂಬ ಜಿಜ್ಞಾಸೆಯ ನಡುವೆಯೇ, ಆಗಸ್ಟ್ ತಿಂಗಳಿನಲ್ಲಿ ಧೀರೇನ್ ರಾಮಕುಮಾರ್ ಅಭಿನಯದ “ಶಿವ 143′ ಸಿನಿಮಾ ಬಿಡುಗಡೆಯಾಗುವ ಮೂಲಕ ಸಂತೋಷ್ ಥಿಯೇಟರ್‌ನಲ್ಲಿ ಮತ್ತೆ ಸಿನಿಮಾ ಪ್ರದರ್ಶನ ಆರಂಭಗೊಂಡಿತ್ತು. ಇದೀಗ ಸಂತೋಷ್ ಥಿಯೇಟರ್ ಕಾಂಪ್ಲೆಕ್ಸ್‌ನಲ್ಲಿಯೇ ಇರುವ ಮತ್ತೂಂದು ಥಿಯೇಟರ್ ನರ್ತಕಿಯಲ್ಲಿ ಕೂಡ ಈ ವಾರದಿಂದ ಮತ್ತೆ ಎಂದಿನಂತೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಈ ವಾರ ತೆರೆ ಕಾಣಲಿರುವ ಪವರ್‌ಸ್ಟಾರ್ ಪುನೀತ್ ರಾಜಕುಮಾರ್, ಮದರಂಗಿ ಕೃಷ್ಣ, ಪ್ರಭುದೇವ ಅಭಿನಯದ “ಲಕ್ಕಿಮ್ಯಾನ್’ ಸಿನಿಮಾ ನರ್ತಕಿ ಥಿಯೇಟರ್‌ನಲ್ಲಿ ತೆರೆಕಂಡಿದೆ.
ಈ ಮೂಲಕ ಕೆ.ಜಿ ರಸ್ತೆಯ ಪ್ರಮುಖ ಎರಡು ಥಿಯೇಟರ್‌ಗಳು ಮತ್ತೆ ಪ್ರದರ್ಶನವಾಗುವ ಮೂಲಕ ಗಾಂಧಿನಗರದಲ್ಲಿ ಸಿನಿಮಾ ಬಿಡುಗಡೆಯ ರಂಗು ಇನ್ನಷ್ಟು ಜೋರಾಗುತ್ತಿದೆ.