ಗದಗ: ನರಸಾಪುರದ ಸರಕಾರಿ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಅಭಿನಂದನೀಯ. ಅದರೊಂದಿಗೆ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಶಿಕ್ಷಕರಿಗೆ ಸಲಹೆ ನೀಡಿದರು.
ಸಮೀಪದ ನರಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸುತ್ತಮುತ್ತಲಿನ ಖಾಸಗಿ ಶಾಲೆಗೆ ಇದು ಪೈಪೋಟಿ ನೀಡುತ್ತಿದ್ದು, ಇತರೆ ಸರಕಾರಿ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಯಲ್ಲಿ ಮೂರು ಕೊಠಡಿಗಳು ತುಂಬಾ ಹದಗೆಟ್ಟಿದ್ದು, ಶಾಲಾ ಮುಖ್ಯಾಧ್ಯಾಪಕ ಕೆ.ಎಸ್. ಕಳಕಣ್ಣವರ ಎರಡು ಕೊಠಡಿಗಳನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಸಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ನೂತನ ಕೊಠಡಿಗೆ 8.70 ಲಕ್ಷ ರೂ. ಹಾಗೂ ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಅನುದಾನದಲ್ಲಿ 5 ಲಕ್ಷ ರೂ. ಬಿಡುಗಡೆಯಾಗಿದೆ. ಈ ಕೂಡಲೇ ಕೆಲಸ ಆರಂಭಿಸಿ, ತ್ವರಿತ ಗತಿಯಲ್ಲಿ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲೇ ಇದ್ದ ಅಭಿಯಂತರರಿಗೆ ಸೂಚಿಸಿದರು.
ವಿಧಾನ ಪರಿಷತ ಸದಸ್ಯ ಎಸ್.ವಿ. ಸಂಕನೂರ ಶಾಲಾ ಕುಡಿಯುವ ನೀರಿನ ಅರವಟಿಗೆ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಲ್ಲದೇ ಎಷ್ಟೋ ಶಾಲೆಗಳು ಮುಚ್ಚವ ಪರಿಸ್ಥಿತಿ ಇದ್ದಾಗ್ಯೂ, ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರತಿ ವರ್ಷ ಹೆಚ್ಚಾಗಲು ಇಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಎತ್ತಿತೋರಿಸುತ್ತದೆ. ಇದಕ್ಕೆ ಕಾರಣರಾದ ಶಿಕ್ಷಕರ ಸೇವೆ ಪ್ರಶಂಸನೀಯ ಎಂದರು.
ಹಾತಲಗೇರಿ ಗ್ರಾಪಂ ಅಧ್ಯಕ್ಷ ಮೈಲಾರಪ್ಪ ಜಾಲಮ್ಮನವರ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ತ ಸದಸ್ಯ ಎಸ್.ವಿ. ಸಂಕನೂರ, ಗ್ರಾಪಂ ಅಧ್ಯಕ್ಷ ಮೈಲಾರಪ್ಪ ಜಾಲಮ್ಮನವರ, ಡಯಟ್ ಹಿರಿಯ ಉಪನ್ಯಾಸಕ ಶಂಕರ ಹೂಗಾರ, ಡಿ.ಎಚ್. ಮಲ್ಲೇಶರವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ದೊಡ್ಡಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಖಾನ್, ಚಂದ್ರಶೇಖರ ಹುಣಸಿಕಟ್ಟಿ, ತಾ.ಪಂ. ಸದಸ್ಯ ಕಲ್ಲನಗೌಡ್ರ, ಎಂ.ಎಸ್. ಮಲ್ಲಾಪುರ, ವಿ.ವಿ. ವಿರಕ್ತಮಠ, ಆಶಾ ಚಿತ್ರಗಾರ, ಎಸ್.ಎ. ದೇಸಾಯಿ, ಹೇಮಂತಗೌಡ ಬೆನಹಾಳ, ಜಂಬಣ್ಣ ಕಲಬುರ್ಗಿ, ಹನುಮಂತ ಬಾವಿಕಟ್ಟಿ, ಶಾಂತಗೌಡ ಬೆನಹಾಳ, ಮಲ್ಲೇಶ ದೊಡ್ಡಮನಿ, ವಸಂತ ಮೇಟಿ, ರಾಜು ತಾಳಿಕೋಟಿ, ಶಿವಾನಂದ ಕರಿಗೌಡ್ರ, ಡಿ.ಎಸ್. ತಳವಾರ, ವಿ.ಎಂ. ಹಿರೇಮಠ, ಕೆ.ಎಸ್. ಕಳಕಣ್ಣವರ, ಎ.ಜಿ. ಹೆರಕಲ್ ಇದ್ದರು.