Advertisement

ಕಿರಿದಾಯಿತು ನಂತೂರು ವೃತ್ತ; ವಾಹನ ಸಂಚಾರ ಕೊಂಚ ಸರಾಗ

10:04 AM Apr 13, 2018 | Team Udayavani |

ಮಹಾನಗರ: ಅವೈಜ್ಞಾನಿಕ ಮತ್ತು ಅಪಾಯಕಾರಿ ಎನಿಸಿಕೊಂಡಿದ್ದ ನಂತೂರು ವೃತ್ತದ ವಿಸ್ತೀರ್ಣವನ್ನು ಶೇ. 50ರಷ್ಟು ಕಿರಿದು ಮಾಡುವ ಮೂಲಕ ಅದರ ವಿನ್ಯಾಸವನ್ನು ಬದಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಇದೀಗ ತಾತ್ಕಾಲಿಕ ಪರಿಹಾರ ಸೂಚಿಸಲಾಗುತ್ತಿದೆ.

Advertisement

ನಂತೂರು ವೃತ್ತದ ಅವ್ಯವಸ್ಥೆ ಹಾಗೂ ಅಲ್ಲಿನ ಅಪಘಾತದ ಸನ್ನಿವೇಶಗಳಿಂದ ಈಗಾಗಲೇ ರೋಸಿ ಹೋಗಿದ್ದ ನಗರ ಜನತೆ ಸಾಕಷ್ಟು ಸಲ ಈ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಮೂರು ತಿಂಗಳ ಹಿಂದೆ ಕೆಲವು ಜನಪರ ಸಂಘಟನೆಗಳು ಕೂಡ ನಂತೂರು ವೃತ್ತದ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಈ ನಡುವೆ, ಡಿಸೆಂಬರ್‌ನಲ್ಲಿ ನಡೆದ ಸರಣಿ ಅಪಘಾತ ಘಟನೆಯ ತೀವ್ರತೆ ಆಧರಿಸಿ ‘ಉದಯವಾಣಿ-ಸುದಿನ’ ಅಭಿಯಾನ ನಡೆಸಿದ್ದು, ಓದುಗರಿಂದಲೂ ಅಪಾಯಕಾರಿ ವೃತ್ತದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಆಡಳಿತ ವರ್ಗ ವೃತ್ತದ ಅವ್ಯವಸ್ಥೆ ಸರಿಪಡಿಸುವುದಕ್ಕೆ ಮುಂದಾಗಿತ್ತು. ಅದರಂತೆ ಇದೀಗ ನಗರದ ಸಂಚಾರಿ ಪೊಲೀಸ್‌ ಇಲಾಖೆಯ ವರದಿ ಆಧರಿಸಿ ರಾ.ಹೆ.ಪ್ರಾ. ವೃತ್ತದ ವಿಸ್ತೀರ್ಣವನ್ನೇ ಕಿರಿದು ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಸದ್ಯ ನಂತೂರು ವೃತ್ತದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಇರಾದೆಯಿಂದ ವೃತ್ತದ ಗಾತ್ರವನ್ನು ಈ ಹಿಂದಿಗಿಂತ ಶೇ. 50ರಷ್ಟು ಕಡಿಮೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಸಂಬಂಧ ರಾ.ಹೆ.ಪ್ರಾ. ವತಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 11 ಮೀಟರ್‌ ನಷ್ಟು ಸುತ್ತಳತೆ ಯಿದ್ದ ನಂತೂರು ವೃತ್ತವನ್ನು ಇದೀಗ ಈಗ 5.5 ಮೀಟರ್‌ ಅಗಲಕ್ಕೆ ಕಿರಿದು ಮಾಡಲಾಗಿದೆ.

ನಂತೂರು ವೃತ್ತ ಸಮಸ್ಯೆ ತೀವ್ರಗೊಳ್ಳುತ್ತಿರುವುದನ್ನು ಮನಗಂಡ ಸಂಚಾರಿ ಪೊಲೀಸರು ಇಲ್ಲಿ ಸಿಗ್ನಲ್‌ ವ್ಯವಸ್ಥೆಯನ್ನು ಅಳವಡಿಸಿದ್ದರು. ಆದರೂ ವಾಹನದಟ್ಟಣೆ ಸಮಸ್ಯೆ ನಿವಾರಣೆಯಾಗಿಲ್ಲ. ಕೆಲವೇ ದಿನಗಳಲ್ಲಿ ಸಿಗ್ನಲ್‌ಗ‌ೂ ಕೂಡ ರೆಡ್‌ ಲೈಟ್‌ ಬಿತ್ತು. ಪರಿಣಾಮವಾಗಿ ಲಕ್ಷಾಂತರ ರೂ. ವೆಚ್ಚವಾಯಿತೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ.

ಇಲ್ಲಿನ ಭೌಗೋಳಿಕ ಪರಿಸ್ಥಿತಿ ವೃತ್ತ ಅಭಿವೃದ್ಧಿಗೆ ಅಡಚಣೆ ಎಂಬ ಮಾತುಗಳು ಕೇಳಿ ಬರುತ್ತವೆ. ವೃತ್ತದ ಅರ್ಧ ಭಾಗ ತಗ್ಗು ಪ್ರದೇಶ ಹಾಗೂ ಇನ್ನರ್ಧ ಭಾಗ ಎತ್ತರವಾಗಿರುವುದು ಸಮಸ್ಯೆ ಸೃಷ್ಟಿಸಿತ್ತು. ಹಾಗಾಗಿ ಇಲ್ಲಿನ ವೃತ್ತ ಅವೈಜ್ಞಾನಿಕವಾಗಿದೆ ಎಂದೇ ಪರಿಗಣಿಸಲಾಗಿತ್ತು.

Advertisement

ವಾಹನ ಓಡಾಟ ಸ್ವಲ್ಪ ಸರಾಗ
ಪಂಪ್‌ವೆಲ್‌ನಿಂದ ಕೆಪಿಟಿ ವೃತ್ತದ ಕಡೆಗೆ ಸಾಗುವ ವಾಹನಗಳು ಸ್ವಲ್ಪ ಎಡಕ್ಕೆ ತಿರುಗಿ ನೇರವಾಗಿ ಮುಂದಕ್ಕೆ ಸಾಗಬೇಕು. ಮಲ್ಲಿಕಟ್ಟೆ ಕಡೆಯಿಂದ ಬಂದು ಬಿಕರ್ನಕಟ್ಟೆ ಕಡೆಗೆ ಹೋಗುವ ವಾಹನಗಳು ನಂತೂರು ಬಸ್‌ನಿಲ್ದಾಣದಿಂದ ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿ ವೃತ್ತಕ್ಕೆ ಅರ್ಧ ಸುತ್ತು ಹೊಡೆದು ಸಾಗಬೇಕು. ಈ ಸಂದರ್ಭ ಕೆಪಿಟಿ ಕಡೆಯಿಂದ ಮಲ್ಲಿಕಟ್ಟೆಗೆ ಬರುವ ವಾಹನಗಳು ಜಂಕ್ಷನ್‌ಗೆ ಬಂದು ಬಲಕ್ಕೆ ತಿರುಗಿ ಸಾಗಬೇಕು. ಪಂಪ್‌ ವೆಲ್‌ ಕಡೆಗೆ ಹೋಗುವ ವಾಹನಗಳು ನೇರವಾಗಿ ಸಾಗಬೇಕು. ಇಲ್ಲಿ ಸಮಸ್ಯೆ ಎಂದರೆ ಏಕಕಾಲಕ್ಕೆ ಎಲ್ಲ ಕಡೆಯಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಕೆಲವು ಸಂದರ್ಭಗಳಲ್ಲಿ ಯಾರು ಎತ್ತ ಕಡೆ ತಿರುಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ.

ವೃತ್ತ ಅಗಲವಾಗಿದ್ದರಿಂದ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದಿತ್ತು. ಇದೀಗ ವೃತ್ತ ಕಿರಿದು ಮಾಡಿರುವುದರಿಂದ ಪಂಪ್‌ವೆಲ್‌, ಮಲ್ಲಿಕಟ್ಟೆ ಕಡೆಯಿಂದ ವೃತ್ತದ ಬಳಿಯಿಂದ ಬರುವಾಗ ಹೆಚ್ಚಿನ ರಸ್ತೆ ಅವಕಾಶವನ್ನು ಪಡೆಯಲಿದ್ದಾರೆ.

ಅಪಘಾತ ವಲಯ ನಂತೂರು…!
ಟ್ರಾಫಿಕ್‌ ಪೊಲೀಸರ (ಪೂರ್ವ ಠಾಣೆ) ಅಂಕಿ ಅಂಶಗಳ ಪ್ರಕಾರ ನಂತೂರು ಜಂಕ್ಷನ್‌ನಲ್ಲಿ 2017ರ ಜನವರಿಯಿಂದ ಡಿಸೆಂಬರ್‌ 7ರ ತನಕ ಸಂಭವಿಸಿದ ವಿವಿಧ ರಸ್ತೆ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರ ಗಾಯ ಹಾಗೂ ನಾಲ್ವರು ಸಾಮಾನ್ಯ ಗಾಯಗೊಂಡಿದ್ದು, 4 ವಾಹನಗಳಿಗೆ ಹಾನಿಯಾಗಿದೆ. 2016ರಲ್ಲಿ ಓರ್ವ ಸಾವು, 3 ಮಂದಿ ತೀವ್ರ ಗಾಯ, 6 ಜನ ಸಾಮಾನ್ಯ ಗಾಯ, 3 ವಾಹನಗಳು ಜಖಂಗೊಂಡಿವೆ. 2015ರಲ್ಲಿ ಈ ವೃತ್ತದಲ್ಲಿ ಸಂಭವಿಸಿದ ಅಪಘಾತದಲ್ಲಿ 5 ಜನ ಸಾವನ್ನಪ್ಪಿದ್ದರು. 5 ಮಂದಿ ತೀವ್ರ ಗಾಯ, 8 ಜನ ಸಾಮಾನ್ಯ ಗಾಯಗೊಂಡಿದ್ದು, 3 ವಾಹನಗಳಿಗೆ ಹಾನಿಯಾಗಿತ್ತು. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2017ರಲ್ಲಿ ಜನವರಿಯಿಂದ ನವೆಂಬರ್‌ ತನಕದ 11 ತಿಂಗಳ ಅವಧಿಯಲ್ಲಿ ವಾಹನ ಚಾಲಕರ ವಿರುದ್ಧ ಅತಿ ವೇಗ ಮತ್ತು ಅಜಾಗ್ರತೆಯ ಚಾಲನೆಗೆ ಸಂಬಂಧಿಸಿ 2,758 ಪ್ರಕರಣಗಳು ದಾಖಲಾಗಿವೆ. 

ಓವರ್‌ಪಾಸ್‌ ಸುದ್ದಿಯೇ ಇಲ್ಲ !
ನಂತೂರು ವೃತ್ತದಲ್ಲಿ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ರಾ.ಹೆ. ಪ್ರಾ.ಇಲ್ಲಿ
ಅಂಡರ್‌ಪಾಸ್‌ ನಿರ್ಮಾಣ ಪ್ರಸ್ತಾವನೆ ಸಿದ್ಧಪಡಿಸಿತ್ತು. ಪದವು ಶಾಲೆಯ ಬಳಿಯಿಂದ ತಾರೆತೋಟ ಬಳಿಯ ಸಂದೇಶ ಲಲಿತಾ ಕಲಾ ವಿದ್ಯಾಲಯದ ಸಮೀಪದವರೆಗೆ ಅಂಡರ್‌ಪಾಸ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಬಳಿಕ ಇದರಲ್ಲಿ ಕೆಲವು ಬದಲಾವಣೆಗಳಾಗಿ ಇದೀಗ ಓವರ್‌ಪಾಸ್‌ ಪ್ರಸ್ತಾವನೆ ರೂಪಿಸಲಾಗಿದೆ. 

ಹೆದ್ದಾರಿ ಪ್ರಾಧಿಕಾರ ಈ ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಕಳುಹಿಸಿ ವರ್ಷ ಕಳೆದಿದ್ದು, ಅನುಮೋದನೆ ಇನ್ನೂ ಸಿಕ್ಕಿಲ್ಲ. ವಿನ್ಯಾಸ ಪರಿಷ್ಕರಣೆಯಿಂದಾಗಿ ಓವರ್‌ಪಾಸ್‌ ನಿರ್ಮಾಣದಲ್ಲಿ ವಿಳಂಬವಾಗಿದ್ದು, ಪ್ರಸ್ತಾವಕ್ಕೆ ಶೀಘ್ರ ಮಂಜೂರಾತಿಗಾಗಿ ಪೂರಕ ಕ್ರಮಗಳು ಆಗುತ್ತಿವೆ. ಈಗ ಈ ಕಡತ ಹೊಸದಿಲ್ಲಿ ರಾ.ಹೆ.ಪ್ರಾ.ಕಚೇರಿಯಲ್ಲಿ ಅನುಮತಿಯ ನಿರೀಕ್ಷೆಯಲ್ಲಿದೆ. ಇಲ್ಲಿ ಓವರ್‌ಪಾಸ್‌ ಆದರೆ, ನಂತೂರಿನ ಬಹುತೇಕ ಸಮಸ್ಯೆ ಗಳು ನಿವಾರಣೆಯಾಗಬಹುದು. ಆದರೆ, ಕಾಮಗಾರಿಯನ್ನೇ ನಿಧಾನ ಮಾಡಿದರೆ ಮತ್ತೆ ಸಮಸ್ಯೆಗಳಿಗೆ ವೇದಿಕೆಯಾಗಬಹುದು. 

ಸಂಚಾರದಲ್ಲಿ ಸುಧಾರಣೆ
ನಂತೂರು ವೃತ್ತವನ್ನು ಅರ್ಧದಷ್ಟು ಕಿರಿದುಗೊಳಿಸಲಾಗಿದೆ. ಹೀಗಾಗಿ ಜಂಕ್ಷನ್‌ನಲ್ಲಿ ವಾಹನಗಳ ಓಡಾಟಕ್ಕೆ ಸುಲಭವಾಗಿದೆ. ಇಲ್ಲಿನ ಟ್ರಾಫಿಕ್‌ ಸಮಸ್ಯೆ ಸ್ವಲ್ಪಮಟ್ಟಿನಲ್ಲಿ ಸುಧಾರಣೆ ಕಾಣುತ್ತಿದೆ. ಮುಂದೆ ವಾಹನಗಳ ಒತ್ತಡ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಮಂಜುನಾಥ್‌ ಶೆಟ್ಟಿ, ಮಂಗಳೂರು
ನಗರ ಟ್ರಾಫಿಕ್‌ ಎಸಿಪಿ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next