Advertisement

Nargund: ಬಸವಾಚರಣೆ ಅಕ್ಷರಶಃ ಪಾಲಿಸಿದ ತೋಂಟದ ಶ್ರೀ

06:21 PM Nov 09, 2023 | Team Udayavani |

ನರಗುಂದ: ತ್ರಿವಿಧ ದಾಸೋಹದ ಮೂಲಕ ಗದುಗಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಕೀರ್ತಿ ತೋಂಟದ ಡಾ| ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಅಪ್ಪಟ ಬಸವ ತತ್ವದ ದಂಡನಾಯಕರಾಗಿದ್ದ ಪೂಜ್ಯರು ಬಸವಾಚರಣೆಯನ್ನು ಅಕ್ಷರಶಃ ಪಾಲಿಸಿದವರು ಎಂದು ಉಪನ್ಯಾಸಕ ಪ್ರೊ.ಆರ್‌.ಎಚ್‌.ತಿಗಡಿ ಅವರು ಸ್ಮರಿಸಿದರು.

Advertisement

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 351ನೇ ಮಾಸಿಕ ಶಿವಾನುಭವ ಹಾಗೂ ಡಾ| ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೀಠ ಸಿಂಹಾಸನವನ್ನು ಧಿಕ್ಕರಿಸಿ ವೈಭವೀಕರಣದ ವ್ಯವಸ್ಥೆಗೆ ತಿಲಾಂಜಲಿ ನೀಡಿದ ಸಿದ್ಧಲಿಂಗ ಶ್ರೀಗಳು ಸರ್ವರನ್ನೂ ಒಪ್ಪಿ ಅಪ್ಪಿಕೊಂಡವರು. ಶ್ರೀಸಾಮಾನ್ಯರ ಜಗದ್ಗುರುಗಳಾಗಿ ಭಕ್ತರ ಹೃದಯ ಸಿಂಹಾಸನದಲ್ಲಿರುವ ಈ ಶತಮಾನದ  ಯುಗಪುರುಷರು. ಅವರ ಜೀವನವೇ ನಮಗೆಲ್ಲ ಆದರ್ಶವಾಗಿದೆ. ಶ್ರೇಷ್ಠ ಪ್ರಗತಿಪರ ಚಿಂತಕರಾಗಿದ್ದ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಎಂದು  ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ,ನಾಡಿನಲ್ಲಿರುವ ಶೋಷಿತರ,
ದುರ್ಬಲರ, ರೈತರ ಅಭ್ಯುದಯಕ್ಕಾಗಿ ಹೋರಾಡಿದ ಲೋಕ ಜಂಗಮರು. ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿಯೇ ಬದುಕಿದ ಸಮಾಜಮುಖೀ ಸಂತರು ಡಾ| ತೋಂಟದ ಸಿದ್ಧಲಿಂಗ ಶ್ರೀಗಳು ಈ ನಾಡಿನ ಅನರ್ಘ್ಯ ರತ್ನ ಎಂದು ಸ್ಮರಿಸಿದರು. ಅತ್ಯುತ್ತಮ
ವಿಚಾರವಾದಿಗಳಾಗಿದ್ದ ಪೂಜ್ಯರು ತಮ್ಮ ಜೀವನವಿರುವವರೆಗೂ ನಾಡಿನ ಹಿಂದುಳಿದವರ ಪರ ಹೋರಾಡಿದ ಸಮಾನತೆಯ ಹರಿಕಾರರು ತೋಂಟದ ಶ್ರೀಗಳು. ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಾವೆಲ್ಲ ಪ್ರಯತ್ನ ಮಾಡಬೇಕಿದೆ ಎಂದು ಶ್ರೀಗಳು ಹೇಳಿದರು.

ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ
ಅಂಜಿತಾ ಯ. ಚಲವಾದಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾದ್ಯಕ್ಷ ಚೆನ್ನಬಸಪ್ಪ ಕಂಠಿ, ಜೆ.ಆರ್‌.ಕದಂ, ಸಂಗಪ್ಪ ಪೂಜಾರ, ಮುಖ್ಯ ಶಿಕ್ಷಕ ಜಿ.ಎಚ್‌.ಕಾಂಬಳೆ, ಪ್ರೊ.ಪಿ.ಎಸ್‌.ಅಣ್ಣಿಗೇರಿ ಉಪಸ್ಥಿತರಿದ್ದರು. ಪ್ರೊ.ಆರ್‌.ಬಿ.ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ  ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next