ಬೇಲೂರು/ಚನ್ನರಾಯಪಟ್ಟಣ: ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರಸಿ, ಜೈನ, ಸಿಖ್ ಸಮುದಾಯಗಳು ದೇಶದ ಭದ್ರ ಬುನಾದಿಯಾಗಿದ್ದು, ಇವೆಲ್ಲವೂಗಳನ್ನು ಕಡೆಗಣಿಸಿ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಟೀಕಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ದೇವೀರಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮದು ಮುಸ್ಲಿಂ ಕುಟುಂಬವಲ್ಲ, ನಾನೇನು ಮುಸ್ಲಿಂ ಅಲ್ಲ, ನಾನೂ ಕೂಡ ಹಿಂದೂ. ನಮ್ಮದೂ ಹಿಂದೂ ಕುಟುಂಬ ಎಂದು ಟಾಂಗ್
ನೀಡಿದರು. ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದರೆ ಪ್ರತ್ಯೇಕ ಪ್ರಧಾನಿ ಮಾಡಬೇಕಾಗುತ್ತದೆ ಎಂಬ ಓಮರ್ ಅಬ್ದುಲ್ಲಾ ಹೇಳಿಕೆ ತರವಲ್ಲ ಎಂದರು.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಕೇರಳದಲ್ಲಿ ಲೋಕಸಭಾ ಚುನಾವಣೆ ಆಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವುದಕ್ಕೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಸ್ತ್ರ ಉಪಯೋಗಿಸುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಬಗ್ಗೆ ಮೋದಿ ಸುಳಿವು ನೀಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾಂಗ್ರೆಸ್ಸಿನ ಹಿರಿಯ ಮುಖಂಡರೇ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಇಂದು ಬಿಜೆಪಿ ಇಷ್ಟು ಪ್ರಬಲವಾಗಲು ಕಾಂಗ್ರೆಸ್ ಮುಖಂಡರಾದ ಬಂಗಾರಪ್ಪ, ರಾಜಶೇಖರಮೂರ್ತಿ, ಬಿಜೆಪಿಗೆ ಹೋಗಿದ್ದೇ ಕಾರಣ. ಬಿಜೆಪಿಯೊಂದಿಗೆ ಕುಮಾರಸ್ವಾಮಿ ಕೈ
ಜೋಡಿಸಿ ಮುಖ್ಯಮಂತ್ರಿಯಾಗಿದ್ದು ನನಗೆ ಎಂದೂ ಮರೆಯಲಾಗದ ನೋವು ಎಂದರು.
ಈ ದೇಶಕ್ಕೆ “ಭಾರತ’ ಎಂದು ನಾಮಕರಣ ಮಾಡುವಾಗ ರಾಜರು ಮತ್ತು ಎಲ್ಲಾ ವರ್ಗದ ಜನರ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಆದರೆ, ಈ ಮೋದಿಯವರು ಏಕಪಕ್ಷೀಯವಾಗಿ ಹಿಂದೂರಾಷ್ಟ್ರ ಮಾಡಲು ಹೊರಟಿರುವುದು ಖಂಡನೀಯ ಎಂದರು.