Advertisement

ಮೋದಿ ಮೋಡಿಗೆ ತಲೆತೂಗಿದ ಜನಸಾಗರ

10:10 AM May 06, 2018 | |

ಮಹಾನಗರ: ಮಂಗಳೂರಿನ ಕೇಂದ್ರ ಮೈದಾನ ಶನಿವಾರ ಅಕ್ಷರಶಃ ಮೋದಿ ಅಲೆಯಲ್ಲಿ ತೇಲಾಡಿತು. ಎಲ್ಲೆಲ್ಲೂ ಬಿಜೆಪಿ ಧ್ವಜರಾರಾಜಿಸಿತು. ‘ಮೋದಿ, ಮೋದಿ’ ಎಂಬ ಘೋಷಣೆ ಮುಗಿಲು ಮುಟ್ಟಿತು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಮಂಗಳೂರಿಗೆ ಆಗಮಿಸುವ ಮೂಲಕ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಹೊಸ ಮೆರುಗು ನೀಡಿದರು. ಅಪಾರ ಸಂಖ್ಯೆಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ಮಂಗಳೂರಿಗೆ ಪ್ರಧಾನಿ ಆಗಮನದ ಹಿನ್ನೆಲೆ ಯಲ್ಲಿ ಬಿಜೆಪಿ ಲಕ್ಷಾಂತರ ಜನರನ್ನು ಸೇರಿಸುವ ನಿಟ್ಟಿನಲ್ಲಿ ಪಣತೊಟ್ಟಿದ್ದರೆ, ಪ್ರಧಾನಿ ಆಗಮನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಸರ್ವ ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಪ್ರಧಾನಿ ಮೋದಿ ಬರುವ ದಾರಿಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಜನರು ಸೇರಿದ್ದರು. ಕೆಲ ವೆಡೆ ಮೋದಿ- ಮೋದಿ ಎಂಬ ಉದ್ಘಾರ ಕೇಳಿ ಬಂತು.

ಬೆಳಗ್ಗಿನಿಂದಲೇ ಖಾಕಿ ಪಡೆಯ ಭದ್ರತೆ
ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿತ್ತು. ಬೆಳಗ್ಗಿನಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಖಾಕಿ ಪಡೆ ನಿಯೋಜಿಸಲ್ಪಟ್ಟು, ಜನಸಂಚಾರದ ಮೇಲೆ ತೀವ್ರ ನಿಗಾವಹಿಸಲಾಗಿತ್ತು. ಮೋದಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕಾಗಿಮಿಸಿದ ರಸ್ತೆಯ ಇಕ್ಕೆಡೆಗಳಲ್ಲೂ ಪ್ಲಾಸ್ಟಿಕ್‌ ಟೇಪು ಬಳಸಿ ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧ ಹೇರಲಾಗಿತ್ತು. ಹಾಗಿದ್ದರೂ ಕೆಲವೊಂದು ಕಾರು, ದ್ವಿಚಕ್ರ ವಾಹನಗಳು ನಿಯಮ ಉಲ್ಲಂಘಿಸಿ ಪಾರ್ಕ್‌ ಮಾಡಿದ ಹಿನ್ನೆಲೆಯಲ್ಲಿ ಅವುಗಳ ಚಕ್ರಗಳಿಗೆ ಟ್ರಾಫಿಕ್‌ ಪೊಲೀಸರು ಲಾಕ್‌ ಮಾಡಿದ ದೃಶ್ಯವೂ ಅಲ್ಲಲ್ಲಿ ಕಂಡು ಬಂತು.

ಇಂದಿರಾ ಕ್ಯಾಂಟೀನ್‌ ಸಖತ್‌ ರೆಸ್ಪಾನ್ಸ್‌
ಮೋದಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡುವ ನೆಹರೂ ಮೈದಾನದ ಬಳಿಯಲ್ಲೇ ಇರುವ ಇಂದಿರಾ ಕ್ಯಾಂಟೀನ್‌ ನಲ್ಲಿ ಮಾತ್ರ ಎಂದಿಗಿಂತಲೂ ಜನರ ಭರಾಟೆ ಶನಿವಾರ ತುಸು ಜೋರಾಗಿತ್ತು. ಕ್ಯಾಂಟೀನ್‌ನ ಕ್ಯಾಶಿಯರ್‌ನಲ್ಲಿದ್ದವರು ‘ಸುದಿನ’ ಜತೆ ಮಾತನಾಡಿ, ಪ್ರತೀ ದಿನ ಸುಮಾರು 500 ಜನ ಊಟ ಮಾಡಿ ಹೋಗುತ್ತಾರೆ. ಶನಿವಾರ ಮಧ್ಯಾಹ್ನ ಊಟಕ್ಕೆ ಜನ ತುಸು ಹೆಚ್ಚಿದ್ದ ಹಾಗೆ ತೋರುತ್ತಿವೆ ಎಂದರು.

ವಾಹನಗಳಿಗೆ ನಗರ ಸಂಚಾರಕ್ಕೆ ಬ್ರೇಕ್‌
ಮೋದಿ ಆಗಮನದ ಹಿನ್ನೆಲೆಯಲ್ಲಿ ಶನಿವಾರ ಅಪರಾಹ್ನ 3 ಗಂಟೆ ಯಾಗುತ್ತಲೇ ಮೊದಲೇ ನಿಗದಿ ಪಡಿಸಿದಂತೆ ಖಾಸಗಿ ಬಸ್‌ ಹಾಗೂ ಇನ್ನಿತರ ಘನ ವಾಹನಗಳಿಗೆ ಮಂಗಳೂರು ನಗರದೊಳಗೆ ಪ್ರವೇಶ ನಿರಾಕರಿಸಲಾಯಿತು. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಲ್ಲಿ ಮಧ್ಯಾಹ್ನ 2 ಗಂಟೆಯ ಬಳಿಕ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಕಂಡು ಬಂತು. 3 ಗಂಟೆಯ ಬಳಿಕ ನಗರದ ಕೆಲವು ರಸ್ತೆಗಳಲ್ಲಿ ಬಸ್‌ ಸಂಚಾರ ನಿರ್ಬಂಧಿಸಲಾಯಿತು. 

Advertisement

ಮಂಗಳೂರಿಗೆ ಬರುವ ಮತ್ತು ಇಲ್ಲಿಂದ ಹೊರಡುವ ಬಸ್‌ಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಕೂಳೂರು- ಉರ್ವ ಸ್ಟೋರ್‌ ಮಾರ್ಗದಲ್ಲಿ ಬರುವ ಬಸ್‌ಗಳು ಲೇಡಿಹಿಲ್‌ನಲ್ಲಿ, ನಂತೂರು ಮಾರ್ಗವಾಗಿ ಬರುವ ಬಸ್‌ಗಳು ಕದ್ರಿ ಮಲ್ಲಿಕಟ್ಟೆಯಲ್ಲಿ, ಬಿ.ಸಿ. ರೋಡ್‌ ಮತ್ತು ತೊಕ್ಕೊಟ್ಟು ಮಾರ್ಗವಾಗಿ ಬರುವ ಖಾಸಗಿ ಬಸ್‌ಗಳನ್ನು ಪಂಪ್‌ ವೆಲ್‌/ ಕಂಕನಾಡಿಯಲ್ಲಿ ಯಾನ ಮೊಟಕುಗೊಳಿಸಿ ಅಲ್ಲಿಂದ ವಾಪಸಾದವು. ಕದ್ರಿ ಮಲ್ಲಿಕಟ್ಟೆಯಿಂದ ಬಂಟ್ಸ್‌ ಹಾಸ್ಟೆಲ್‌ ರಸ್ತೆಯಲ್ಲಿ ಬಸ್‌ ಸಂಚಾರ ನಿಷೇಧಿಸಲಾಗಿತ್ತು. ಇದ ರಿಂದ ಹಂಪನಕಟ್ಟೆ ಕಡಗೆ ಹೋಗುವ ಪ್ರಯಾಣಿಕರು ತೊಂದರೆಗೆ ಒಳಗಾದರು. ಕೆಲವು ಖಾಸಗಿ ಮತ್ತು ಕೆ.ಎಸ್‌.ಆರ್‌ .ಟಿ.ಸಿ. ಸಿಟಿ/ ಸರ್ವೀಸ್‌ ಬಸ್ಸುಗಳು ಸಂಚಾರವನ್ನೇ ನಿಲ್ಲಿಸಿದ್ದವು. ಕಾಸರಗೋಡು,ಬಿ.ಸಿ.ರೋಡ್‌ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಪಂಪ್‌ವೆಲ್‌- ನಂತೂರು- ಕೆಪಿಟಿ – ಕುಂಟಿಕಾನ್‌ ಮಾರ್ಗವಾಗಿ ಬಿಜೈ ನಿಲ್ದಾಣಕ್ಕೆ ಸಂಚರಿಸಿದವು. 

ಮಾರುಕಟ್ಟೆ-ನಿರಾಳ
ಕೇಂದ್ರ ಮಾರುಕಟ್ಟೆ ಹಾಗೂ ಅದರ ಸುತ್ತಮುತ್ತ ಮಧ್ಯಾಹ್ನದವರೆಗೆ ಎಂದಿನಂತೆ ವ್ಯವಹಾರ, ಜನರ ಓಡಾಟ ಕಂಡು ಬಂತು. ಸಂಜೆಯಾಗುತ್ತಲೇ ವ್ಯಾಪಾರ-ವಹಿವಾಟು ಕಡಿಮೆ ಯಾಯಿತು. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಶಿರಸಿಯ ಸುರೇಶ್‌ ಅವರು ‘ಸುದಿನ’ ಜತೆಗೆ ಮಾತನಾಡಿ, ಮೋದಿ ಆಗಮನದಿಂದಾಗಿ ಸಂಚಾರ ತೊಡಕಾಗಿ ವ್ಯವಹಾರಕ್ಕೇನೂ ತೊಡಕುಂಟಾಗಿಲ್ಲ ಎಂದರು. ಬಾಳೆಹಣ್ಣು ವ್ಯಾಪಾರಿ ಬಂಟ್ವಾಳದ ಇಬ್ರಾಹಿಂ ಮಾತನಾಡಿ, ವ್ಯಾಪಾರ ತುಸು ಡಲ್‌ ಆಗಿತ್ತು. ಶನಿವಾರ ಹಾಗೂ ರವಿವಾರ ಯಾವಾಗಲೂ ವ್ಯಾಪಾರ ತುಸು ಜೋರಿರುತ್ತದೆ. ಆದರೆ ಶನಿವಾರ ಡಲ್‌ ಇದೆ ಎಂದೆನಿಸುತ್ತದೆ. ಹಾಗಿದ್ದರೂ ಅದಕ್ಕೆ ಮೋದಿ ಆಗಮನದ ಕಾರಣವೋ ಗೊತ್ತಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next