ಉಡುಪಿ: ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರು ಮತೊಮ್ಮೆ ಪ್ರಧಾನಿಯಾಗಬೇಕು ಎಂಬುದು ದೇಶವಾಸಿಗಳ ಒತ್ತಾಸೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಚುನಾವಣಾ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರದ ಅನೇಕ ಯೋಜನೆಗಳನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತರುವ ಪ್ರಯತ್ನ ಮಾಡಿದ್ದೇನೆ.ಜಿಲ್ಲೆಯಲ್ಲಿ ಪ್ರಥಮ ಕೇಂದ್ರೀಯ ವಿದ್ಯಾಲಯ, ಪ್ರಥಮ ಬಾರಿಗೆ ಆಭರಣ ತಯಾರಿ ತರಬೇತಿಗೆ ಕಾಲೇಜು, ಸ್ಕಿಲ್ ಡೆವಲಪ್‌ಮೆಂಟ್‌ಗೆ ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ಕಾಲೇಜು, ಮಹಿಳೆಯರಿಗೆ ದೌರ್ಜನ್ಯ ವಾದಾಗ ವೈದ್ಯಕೀಯ ಮತ್ತು ಕಾನೂನು ನೆರವಿನೊಂದಿಗೆ ಆಶ್ರಯ ನೀಡುವ ರಾಜ್ಯದ ಮೊದಲ ಸಖೀ ಸೆಂಟರ್, ಪ್ರಥಮ ಪಾಸ್ ಪೋರ್ಟ್ ಸೆಂಟರ್, ಪ್ರಧಾನ ಮಂತ್ರಿ ಕೌಶಲಾಭಿವೃದ್ದಿ ಕೇಂದ್ರ, ಸರಕಾರಿ ಸ್ಕೂಲ್ ಎಂಡ್ ಟ್ರೆçನಿಂಗ್ ಸೆಂಟರ್, ರಾಷ್ಟ್ರೀಯ ಹೆದ್ಧಾರಿ ಅಭಿವೃದ್ಧಿ ಜತೆಗೆ ರಾಜ್ಯ ಹೆದ್ದಾರಿಗಳ ಉನ್ನತೀಕರಣ, ಬಹು ಬೇಡಿಕೆಯ ಕೊಂಕಣ ರೈಲ್ವೇ ಟ್ರಾಕ್ ಡಬ್ಲಿಂಗ್ ಮತ್ತು ಇಲೆಕ್ಟ್ರಿಫಿಕೇಶನ್ ಕಾಮಗಾರಿ ಮೊದಲಾದ ಪ್ರಮುಖ ಯೋಜನೆಗಳಿಗೆ ಚಾಲನೆ ದೊರೆತಿದೆ. ಸ್ವತ್ಛ ಭಾರತ ಅಭಿಯಾನದಡಿ ಶೌಚಾಲಯ, ಪಂಡಿತ್ ದೀನ್‌ದಯಾಳ್ ಉಪಾಧ್ಯ ವಿದ್ಯುದ್ದೀಕರಣ ಯೋಜನೆಯಡಿ ಮನೆ ಮನೆಗೆ ವಿದ್ಯುತ್ ಸಂಪರ್ಕ, ಉಜ್ವಲ ಗ್ಯಾಸ್ ವಿತರಣೆ ಹೀಗೆ ಪ್ರತಿಯೊಂದು ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ’ ಎಂದರು.
“ಬಹಳಷ್ಟು ಕೆಲಸ ಕಾರ್ಯಗಳು ಇನ್ನೂ ಆಗಬೇಕಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇನ್ನಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಮತ್ತು ಈಗಾಗಲೇ ಪ್ರಾರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಇದೆ. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಬಿಜೆಪಿಯನ್ನು ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಚುನಾವಣಾ ಸಂಚಾಲಕ, ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಸಭಾ ವಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್,ಯಶ್‌ಪಾಲ್ ಸುವರ್ಣ, ಸಂಧ್ಯಾ ರಮೇಶ್, ರಾಷ್ಟ್ರೀಯ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು, ಜಿಲ್ಲಾ, ಮಂಡಲ, ಮೋರ್ಚಾ, ಪ್ರಕೋಷ್ಠಗಳ ಪದಾಧಿಕಾರಿಗಳು ಮತ್ತು ವಿವಿಧ ಸ್ತರದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.