ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ನಗರದ ಬೂತ್ ನಂಬರ್ 80ರ ಬಿಜೆಪಿ ಅಧ್ಯಕ್ಷೆ ಶ್ರುತಿ ಅಪ್ಟೇಕರ್ ಅವರಿಗೆ ಮೊಬೈಲ್ ಕರೆ ಮಾಡಿ ರಾಜ್ಯದ ಚುನಾವಣೆ ಸೆರಿದಂತೆ ರೈತರ ವಿಷಯಗಳ ಬಗ್ಗೆ ಸುದೀರ್ಘವಾಗಿ ಏಳು ನಿಮಿಷಗಳ ಕಾಲ ಮಾತನಾಡಿದರು.
ದೇಶದ ವಿವಿಧ ಬೂತ್ ಅಧ್ಯಕ್ಷರೊಂದಿಗೆ ನಡೆದ ಆಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮರಾಠಿಯಲ್ಲಿಯೇ ಶ್ರುತಿ ಅವರೇ ಹೇಗಿದ್ದೀರಿ? ಎಂದು ಪ್ರಶ್ನಿಸಿ ಮಾತು ಆರಂಭಿಸಿದರು.
ಶ್ರುತಿ ಆಪ್ಟೇಕರ್‌ರವರೆ, ನಿಮ್ಮಲ್ಲಿ ಚುನಾವಣಾ ಅಭಿಯಾನ ಹೇಗೆ ನಡೆಯುತ್ತಿದೆ? ಕರ್ನಾಟಕದಲ್ಲಿ ಸಾಮಾನ್ಯ ಮತದಾರರು ವಿಶೇಷವಾಗಿ, ಅಲ್ಲಿಯ ಮಹಿಳೆಯರು ಈ ಚುನಾವಣೆ ಕುರಿತು ಏನು ಹೇಳುತ್ತಿದ್ದಾರೆ?
ಹತ್ತು ವರ್ಷದ ಮೋದಿ ಸರ್ಕಾರದ ಸಾಧನೆ, ಕರ್ನಾಟಕಕ್ಕೆ ಬಂದ ಕೊಡುಗೆ, ಮಹಿಳಾ ಸಬಲೀಕರಣ, ನಾರಿ ಶಕ್ತಿ ಯೋಜನೆ ಇವೆಲ್ಲವನ್ನೂ ಮತದಾರರಿಗೆ ಮೋದಿ ಆ್ಯಪ್ ಮತ್ತು ಸರಳ್ ಆ್ಯಪ್ ಮೂಲಕರ ತಿಳಿಸುತ್ತಿದ್ದೇವೆ, ಅದರಲ್ಲೂ ಮಹಿಳಾ ಮತದಾರರಿಗೆ ಹೆಚ್ಚಾಗಿ ತಿಳಿಸುತ್ತಿದ್ದೇವೆ ಎಂದು ಶ್ರುತಿ ಉತ್ತರಿಸಿದರು.
ಮೋದಿ: ಶ್ರುತಿಯವರೇ ಕೃಷಿ ಮಾಡುವಂತಹ ಅನ್ನದಾತರು ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕಬ್ಬು ಬೆಳೆಯುವಂತಹ ಅಧಿಕ ಬೆಳೆಗಾರರು ಇದ್ದಾರೆ. ನಮ್ಮ ಸರ್ಕಾರ ರೈತರಿಗಾಗಿ ಮಾಡಿರುವಂತಹ ಕಾರ್ಯದ ಬಗ್ಗೆ ಕರ್ನಾಟಕದ ಅನ್ನದಾತರು ಏನು ಹೇಳುತ್ತಿದ್ದಾರೆ?
ಶ್ರುತಿ: ಕರ್ನಾಟಕದಲ್ಲಿ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ಕೇಂದ್ರ ಕೊಡುತ್ತಿದ್ದ 6 ಸಾವಿರ ರೂ. ಜತೆಗೆ 4 ಸಾವಿರ ರೂ. ಸೇರಿಸಿ ಕೊಡುತ್ತಿದ್ದರು. ಈವಾಗ ಸರ್ಕಾರ ಆ 4 ಸಾವಿರ ರೂ. ರಾಜಕೀಯ ದುರುದ್ದೇಶದಿಂದ ನಿಲ್ಲಿಸಿ, ಸಮಸ್ಯೆಯಾಗಿದೆ. ಪ್ರತಿ ಮತದಾರನ್ನು ಭೇಟಿ ಮಾಡುವ ಯೋಜನೆ ತಯಾರಾಗಿದೆ. ಸಮಾಜದ ವಿಭಿನ್ನ ವರ್ಗಗಳ ಸಭೆಯನ್ನು ಕರೆದಿದ್ದೇವೆ. ನಮ್ಮ ಸರ್ಕಾರ ಹಾಗು ನಮ್ಮ ಪಕ್ಷದ ಆ ವರ್ಗದ ಜನರಿಗೆ ಮಾಡಿದಂತ ಕೆಲಸವನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.