Advertisement

16ಕ್ಕೆ ವಿದಾಯ; 17ಕ್ಕೆ ಪದಾರ್ಪಣೆ

09:23 AM May 26, 2019 | mahesh |

ನವದೆಹಲಿ: ಚುನಾವಣಾ ಫ‌ಲಿತಾಂಶ ಪ್ರಕಟವಾಗುತ್ತಲೇ, 17ನೇ ಲೋಕಸಭೆ ರಚನೆಗೆ ಪ್ರಕ್ರಿಯೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಶುಕ್ರವಾರ ನವದೆಹಲಿಯಲ್ಲಿ ಸಭೆ ಸೇರಿ 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡಿತು. ಇದೇ ಸಂದರ್ಭದಲ್ಲಿ ಹಾಲಿ ಕೇಂದ್ರ ಸಂಪುಟದ ಎಲ್ಲಾ ಸಚಿವರು ಪ್ರಧಾನಿ ಮೋದಿಗೆ ರಾಜೀನಾಮೆ ನೀಡಿದ್ದಾರೆ. ಸಂಪುಟ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿಯಾಗಿ ಸಂಪುಟ ಸದಸ್ಯರ ರಾಜೀನಾಮೆ ಸಲ್ಲಿಸಿದರು. ಜತೆಗೆ 16ನೇ ಲೋಕಸಭೆ ವಿಸರ್ಜನೆಯ ಬಗ್ಗೆ ಶಿಫಾರಸು ಮಾಡಿದರು. ರಾಷ್ಟ್ರಪತಿ ಅದನ್ನು ಅಂಗೀಕರಿಸಿದ್ದಾರೆ ಹಾಗೂ ಹೊಸ ಸರ್ಕಾರ ರಚನೆಯಾಗುವವರೆಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿದ್ದಾರೆ.

Advertisement

ರಾಷ್ಟ್ರಪತಿ ಕೋವಿಂದ್‌ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸದಸ್ಯರ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ರಾತ್ರಿ ಔತಣಕೂಟ ಏರ್ಪಡಿಸಿದ್ದರು. ಜೂ.3ರ ಒಳಗಾಗಿ 17ನೇ ಲೋಕಸಭೆ ರಚನೆಯಾಗಬೇಕು. ಅದಕ್ಕಿಂತ ಮೊದಲು ಚುನಾವಣಾ ಆಯೋಗದ ಮೂವರು ಸದಸ್ಯರು ರಾಷ್ಟ್ರಪತಿಯವರನ್ನು ಭೇಟಿಯಾಗಿ ನೂತನವಾಗಿ ಚುನಾಯಿತರಾದ ಸದಸ್ಯರ ವಿವರಗಳನ್ನು ಸಲ್ಲಿಸಲಿದ್ದಾರೆ.

ಅಡ್ವಾಣಿ, ಜೋಶಿ ಭೇಟಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಡಾ.ಮುರಳೀ ಮನೋಹರ ಜೋಶಿ ಅವರನ್ನು ಭೇಟಿಯಾಗಿದ್ದರು. ಅಡ್ವಾಣಿಯವರ ನಿವಾಸಕ್ಕೆ ತೆರಳಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಿರಿಯ ನಾಯಕನ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು. ಅದಕ್ಕೆ ಸಂಬಂಧಿಸಿದ ಫೋಟೋವನ್ನು ಮೋದಿ ಟ್ವೀಟ್ ಮಾಡಿ ಹಿರಿಯ ನಾಯಕ ನಿವಾಸಕ್ಕೆ ತೆರಳಿಗೆ ಆಶೀರ್ವಾದ ಪಡೆದಿದ್ದಾಗಿ ಬರೆದುಕೊಂಡಿದ್ದಾರೆ.

ಸಿಬ್ಬಂದಿಗೆ ಥ್ಯಾಂಕ್ಸ್‌

ಪ್ರಧಾನಿ ನರೇಂದ್ರ ಮೋದಿ ತಮ್ಮ ಕಚೇರಿಯ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಧನ್ಯವಾದ ಸಮರ್ಪಿಸಿದರು. ಸೌತ್‌ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಗೆ ಶುಕ್ರವಾರ ತೆರಳಿದ ಅವರು, ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ, ಕಾರ್ಯದರ್ಶಿ ಭಾಸ್ಕರ್‌ ಕುಲ್ಭೇ ಸೇರಿದಂತೆ ಹಿರಿಯ ಅಧಿಕಾರಿ, ಸಿಬ್ಬಂದಿಯನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಸನ್ಮಾನಿಸಲಾಯಿತು.

ರಾಜೀನಾಮೆ ನೀಡಿದ ಉ.ಪ್ರ ಕಾಂಗ್ರೆಸ್‌ ಮುಖ್ಯಸ್ಥ

ಲಖನೌ: ಕಾಂಗ್ರೆಸ್‌ ಹೀನಾಯವಾಗಿ ಸೋಲುತ್ತಿದ್ದಂತೆಯೇ ಪಕ್ಷದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಅಮೇಠಿಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸೋಲಿಗೆ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ ಬಬ್ಬರ್‌ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಫ‌ತೇಪುರ್‌ ಸಿಕ್ರಿಯಿಂದ ಸ್ಪರ್ಧಿಸಿದ್ದ ಬಬ್ಬರ್‌ ಕೂಡಾ 4.99 ಲಕ್ಷ ಮತಗಳ ಅಂತರದಿಂದ ಸೋಲುಂಡಿದ್ದಾರೆ. ವಿಜೇತರಿಗೆ ನನ್ನ ಅಭಿನಂದನೆಗಳು. ಪಕ್ಷದ ನಾಯಕರನ್ನು ಭೇಟಿ ಮಾಡಿ ನನ್ನ ದೃಷ್ಟಿಕೋನಗಳನ್ನು ವಿವವರಿಸುತ್ತೇನೆ. ಉತ್ತರ ಪ್ರದೇಶ ಕಾಂಗ್ರೆಸ್‌ಗೆ ಈ ಫ‌ಲಿತಾಂಶ ಅತ್ಯಂತ ಆಘಾತಕಾರಿ. ನನ್ನ ಜವಾಬ್ದಾರಿಗಳನ್ನು ನಾನು ನಿರ್ವಹಿಸಲಿಲ್ಲ ಎಂದು ರಾಜ್‌ ಬಬ್ಬರ್‌ ಟ್ವೀಟ್ ಮಾಡಿದ್ದಾರೆ. ಇದೇ ರೀತಿ ಒಡಿಶಾದ ಕಾಂಗ್ರೆಸ್‌ ಅಧ್ಯಕ್ಷ ನಿರಂಜನ್‌ ಪಟ್ನಾಯಕ್‌ ಕೂಡ ರಾಜೀನಾಮೆ ನೀಡಿದ್ದಾರೆ. ನಾನೂ ಚುನಾವಣೆಗೆ ಸ್ಪರ್ಧಿಸಿದ್ದೆ. ನನಗೆ ಪಕ್ಷವು ಜವಾಬ್ದಾರಿ ನೀಡಿತ್ತು. ಈ ಸೋಲಿಗೆ ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ನಿರಂಜನ್‌ ಟ್ವೀಟ್ ಮಾಡಿದ್ದಾರೆ.

ರಾಹುಲ್ ಕೊಡುವರೇ ರಾಜೀನಾಮೆ?

ರಾಹುಲ್ ಗಾಂಧಿ ನೇತೃತ್ವದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಕಾಂಗ್ರೆಸ್‌ ಹೀನಾಯ ಸೋಲು ಉಂಟಾಗಿದೆ. ಹೀಗಾಗಿ, ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಪೂರಕವಾಗಿ ನವದೆಹಲಿಯಲ್ಲಿ ಶನಿವಾರ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯೂಸಿ) ನಡೆಯಲಿದೆ. ಈ ಸಂದರ್ಭದಲ್ಲಿ ರಾಹುಲ್ ತನ್ನ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ರಾಹುಲ್ ಗಾಂಧಿಯವರ ನಿರ್ಧಾರಕ್ಕೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಮತ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಈಗಾಗಲೇ ಅತೃಪ್ತಿ ಉಂಟಾಗಿದೆ ಎಂದು ಹೇಳಲಾಗಿದೆ. ಇತರ ಪಕ್ಷಗಳ ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ತಿಳಿದಿದ್ದರೂ, ಅದೇ ಸೂತ್ರಕ್ಕೆ ಕಟ್ಟುಬಿದ್ದು, ಮುಂದುವರಿಸಲಾಯಿತು. ಅದು ಭಾರಿ ಪ್ರತಿಕೂಲ ಪರಿಣಾಮ ತಂದೊಡ್ಡಿತು ಎಂದು ಕೆಲ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಸಿಡಬ್ಲ್ಯೂಸಿ ಸಭೆಯಲ್ಲಿ ಸತತ ಎರಡನೇ ಬಾರಿಗೆ ಉಂಟಾಗಿರುವ ಸೋಲಿನ ಬಗ್ಗೆ ಕಾರ್ಯಕಾರಿಣಿಯಲ್ಲಿ ಮುಖಂಡರು ಪರಾಮರ್ಶೆ ನಡೆಸುವ ಸಾಧ್ಯತೆ ಇದೆ. ಹಾಲಿ ಚುನಾವಣೆಯಲ್ಲಿ 55 ಕ್ಷೇತ್ರಗಳಲ್ಲಿ ಗೆದ್ದಿದ್ದು ಅಧಿಕೃತ ಪ್ರತಿಪಕ್ಷ ಮಾನ್ಯತೆಯೂ ಸಿಗದು.

ದಾಖಲೆ ಬರೆದ ಷೇರುಪೇಟೆ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನಿರ್ಣಾಯಕ ಜನಾದೇಶ ಬಂದ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಭ್ರಮ ಇಮ್ಮಡಿಸಿದೆ. ಮೋದಿ ಸರ್ಕಾರವು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿದೆ ಎಂಬ ಆಶಾಭಾವದಿಂದಾಗಿ ಹೂಡಿಕೆದಾರರು ಶುಕ್ರವಾರ ಷೇರುಗಳ ಖರೀದಿಯಲ್ಲಿ ತೊಡಗಿದರು. ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 623.33 ಅಂಕ ಏರಿಕೆಯಾಗಿ, 39,434ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದು ಷೇರುಪೇಟೆಯ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಎಂಬ ದಾಖಲೆಯನ್ನೂ ಬರೆಯಿತು. ಇನ್ನೊಂದೆಡೆ, ನಿಫ್ಟಿ ಕೂಡ 187 ಅಂಕ ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 11,844ರಲ್ಲಿ ವಹಿವಾಟು ಮುಗಿಸಿತು.

ಮೋದಿ ಮತ್ತು ಅಮಿತ್‌ ಶಾ ಉತ್ತಮ ಸಾಧನೆ ಮಾಡಿ, ದಾಖಲೆಯ ವಿಜಯ ಸಂಪಾದಿಸಿದ್ದಾರೆ. ನಮ್ಮ ಪಕ್ಷದಲ್ಲಿ ಕಿರಿಯರು ಹಿರಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದು ಕ್ರಮ.
– ಡಾ.ಮುರಳೀ ಮನೋಹರ ಜೋಶಿ, ಮಾಜಿ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next