Advertisement

ಚುನಾವಣೆ ಬಂದಾಗ ಮೋದಿಗೆ ರೈತರ ನೆನಪು: ಎಚ್‌ಡಿಕೆ

07:17 AM Mar 02, 2019 | Team Udayavani |

ಮೈಸೂರು: ಲೋಕಸಭೆ ಚುನಾವಣೆ ಹತ್ತಿರವಾದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ನೆನಪಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಕಳೆದ ನಾಲ್ಕೂವರೆ ವರ್ಷಗಳಿಂದ ರೈತರ ಬಗ್ಗೆ ಮಾತನಾಡದ ಮೋದಿ ಅವರು, ಚುನಾವಣೆ ಇನ್ನೆರಡು ತಿಂಗಳು ಇರುವಾಗ ರೈತರಿಗೆ ವರ್ಷಕ್ಕೆ 6 ಸಾವಿರ ರೂ.ಗಳನ್ನು ದೇಶದ 12 ಕೋಟಿ ರೈತರಿಗೆ ಕೊಡುವುದಾಗಿ ಹೇಳುತ್ತಿದ್ದಾರೆ. ಅದರ ಮೊದಲ ಕಂತಾಗಿ ಒಂದು ಕೋಟಿ ರೈತ ಕುಟುಂಬಗಳಿಗೆ 2 ಸಾವಿರ ರೂ. ಕೊಟ್ಟಿದ್ದಾರೆ.

ಇದರಿಂದ ನಮ್ಮ ರಾಜ್ಯದ ರೈತರಿಗೆ ಎಷ್ಟು ಹಣ ಬರುತ್ತದೆ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿಯವರ ಆಟಗಳನ್ನೇಲ್ಲಾ ನೋಡುತ್ತಿದ್ದೇವೆ, ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೂ ರಾಜ್ಯದ 46 ಲಕ್ಷ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ 6 ಸಾವಿರ ರೂಪಾಯಿ ಕೊಟ್ಟರೂ ಒಟ್ಟು ರಾಜ್ಯದ ರೈತರಿಗೆ ಸಿಗುವುದು 2,090 ಕೋಟಿ ಮಾತ್ರ.

ಆದರೆ, ರಾಜ್ಯಸರ್ಕಾರ ಕ್ಷೀರಭಾಗ್ಯ ಯೋಜನೆ ಮೂಲಕ ಹಾಲು ಉತ್ಪಾದಕರಿಗೆ ಕೊಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 6 ರೂಪಾಯಿಗೆ ಹೆಚ್ಚಿಸಿರುವುದರಿಂದ ಈ ಸಬ್ಸಿಡಿ ಹಣವೇ 2500 ಕೋಟಿ ಆಗಲಿದೆ ಎಂದರು. ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರಮೋದಿ ಅವರು ಭಾಷಣ ಮಾಡುತ್ತಾ ಕರ್ನಾಟಕದ ಸಾಲಮನ್ನಾ ಯೋಜನೆಯನ್ನು ಪ್ರಸ್ತಾಪಿಸಿ ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎಂದಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ 20 ಸಾವಿರ ಕೋಟಿಯಷ್ಟು ಬೆಲೆನಷ್ಟ ಉಂಟಾಗಿದೆ. ಹಿಂಗಾರಿನಲ್ಲಿ 13 ಸಾವಿರ ಕೋಟಿ ಬೆಳೆ ನಷ್ಟ ಉಂಟಾಗಿದೆ. ಹೀಗಾಗಿ ಬೆಳೆನಷ್ಟದಿಂದ ನೊಂದ ರೈತರ ನೆರವಿಗಾಗಿ ಸಾಲಮನ್ನಾ ಮಾಡಲೇ ಬೇಕಿದೆ.

Advertisement

ಈ ವಿಚಾರದಲ್ಲಿ ನಾನು ಕೊಟ್ಟ ಮಾತಿಗೆ ಬದ್ಧನಾಗಿದ್ದೇನೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ನೀವು ಕಟ್ಟುವ ತೆರಿಗೆ ಹಣದಿಂದಲೇ ಸಾಲಮನ್ನಾಗೆ ಹಣ ಹೊಂದಿಸಬೇಕಿದೆ. 2.37 ಲಕ್ಷ ಕೋಟಿ ಗಾತ್ರದ ರಾಜ್ಯ ಬಜೆಟ್‌ನಲ್ಲಿ ಸರ್ಕಾರಿ ನೌಕರರ ಸಂಬಳ ಹಾಗೂ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹಣ ತೆಗೆದಿಟ್ಟು , ವಿನಿಯೋಗಿಸಿ, ಇವುಗಳ ಮಧ್ಯೆ ಸಾಲಮನ್ನಾಗೆ ಪ್ರತಿ ತಿಂಗಳೂ ಹಣ ಹೊಂದಿಸಬೇಕಿದೆ.

ರೈತರು ಬ್ಯಾಂಕುಗಳಿಗೆ ಕಟ್ಟಬೇಕಾದ ಬಡ್ಡಿ ಹಣವನ್ನೂ ಸರ್ಕಾರವೇ ಭರಸಬೇಕಾಗುತ್ತದೆ. ಆದರೂ ಸಾಲಮನ್ನಾಗೆ ಬೇರೆ ಇಲಾಖೆಗಳ ಹಣ ಕಡಿತ ಮಾಡುತ್ತಿದ್ದಾರೆ ಎಂಬ ಭಾವನೆಯನ್ನು ರೈತರಲ್ಲಿ ಮೂಡಿಸುತ್ತಿದ್ದಾರೆ. ಫೆ.26ರವರೆಗೆ ರಾಜ್ಯದ 10.40 ಲಕ್ಷ ರೈತ ಕುಟುಂಬಗಳ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾಲಮನ್ನಾದ ಹಣ ಭರಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next