Advertisement

Narendra Modi: ಲೋಕಸಭಾ ಚುನಾವಣೆಗೆ ಕಹಳೆಯೂದಿದ ಮೋದಿ

09:16 PM Apr 06, 2023 | Team Udayavani |

ನವದೆಹಲಿ: ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆಯ ಮೂಲಕವೇ ಪ್ರಧಾನಿ ನರೇಂದ್ರ ಮೋದಿಯವರು 2024ರ ಲೋಕಸಭೆ ಚುನಾವಣಾ ಕಹಳೆ ಮೊಳಗಿಸಿದ್ದಾರೆ.

Advertisement

“ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದರೂ ನಾವು ಸುಮ್ಮನಿರಲು ಸಾಧ್ಯವಿಲ್ಲ. 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಗಾಗಲೇ ಜನರು ಹೇಳಲು ಶುರು ಮಾಡಿಕೊಂಡಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರಾದ ನಾವೆಲ್ಲರೂ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯವನ್ನು ಗೆಲ್ಲಬೇಕು’ ಎಂದು ಮೋದಿ ಹೇಳಿದ್ದಾರೆ. ಅಲ್ಲದೇ, 2014ರಲ್ಲಿ ಮೊತ್ತಮೊದಲ ಬಾರಿಗೆ ಪೂರ್ಣ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ “800 ವರ್ಷಗಳ ಗುಲಾಮಗಿರಿ’ಗೆ ಅಂತ್ಯಹಾಡಿತು ಎಂದೂ ನುಡಿದಿದ್ದಾರೆ.

ಹನುಮಾನ್‌ ಜಯಂತಿಯ ದಿನವಾದ ಗುರುವಾರವೇ ಬಿಜೆಪಿಯ ಸ್ಥಾಪನಾ ದಿನಾಚರಣೆ ನಡೆದ ಕಾರಣ, ಮೋದಿ ತಮ್ಮ ಭಾಷಣದಲ್ಲಿ ಹಲವು ಬಾರಿ ಆಂಜನೇಯನನ್ನು ಸ್ಮರಿಸಿದ್ದು ಕಂಡುಬಂತು. “ಬಿಜೆಪಿಯು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದೇಶದ ಕಾನೂನು ಸುವ್ಯವಸ್ಥೆ ಸಮಸ್ಯೆಯ ವಿರುದ್ಧ ಹೋರಾಡಲು ಬದ್ಧವಾಗಿದೆ. ನಾವು ಹನುಮಾನ್‌ನಿಂದ ಸ್ಫೂರ್ತಿ ಪಡೆದವರು. ಇಂದಿನ ಭಾರತವು, ಹನುಮಾನನಂತೆ ಸವಾಲುಗಳ ವಿರುದ್ಧ ಹೋರಾಡುವುದಕ್ಕೆ ಸಜ್ಜಾಗಿದೆ’ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳ “ಸಂಕುಚಿತ ಮನಸ್ಥಿತಿ, ಭ್ರಷ್ಟಾಚಾರ, ಜಾತಿವಾದ ಮತ್ತು ಕುಟುಂಬ ರಾಜಕಾರಣದ’ ವಿರುದ್ಧವೂ ಮುಗಿಬಿದ್ದರು.

ಪ್ರತಿಪಕ್ಷಗಳ ವಿರುದ್ಧ ವಾಗ್ಧಾಳಿ
ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಮೋದಿ, ” ಇತ್ತೀಚೆಗೆ ನಡೆದ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ “ಮೋದಿ ನಿಮ್ಮ ಸಮಾಧಿ ತೋಡುತ್ತೇವೆ’ ಎಂಬ ಘೋಷಣೆಗಳು ಕೇಳಿಬಂದವು. ಇದು ಪ್ರತಿಪಕ್ಷಗಳು ತೀರಾ ಹತಾಶರಾಗಿರುವುದಕ್ಕೆ ಸಾಕ್ಷಿ. ಬಾದಶಾಹಿಗಳ ಮನಸ್ಥಿತಿ ಹೊಂದಿರುವ ಇವರು ಇತರರನ್ನು ವಿಶೇಷವಾಗಿ ಬಡವರು ಮತ್ತು ತುಳಿತಕ್ಕೊಳಗಾದವರನ್ನು ತಮ್ಮ ಗುಲಾಮರಂತೆ ನಡೆಸಿಕೊಂಡು ಬಂದಿದ್ದಾರೆ. ಪ್ರತಿಪಕ್ಷಗಳು ಕೇವಲ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತವೆ. ಆದರೆ, ಬಿಜೆಪಿ ಪ್ರತಿಯೊಬ್ಬ ಭಾರತೀಯನಿಗೂ ನೆರವಾಗಲು ಶ್ರಮಿಸುತ್ತದೆ’ ಎಂದರು.

10 ಲಕ್ಷ ಪ್ರದೇಶಗಳಲ್ಲಿ ಪ್ರಸಾರ
ದೇಶಾದ್ಯಂತ 10 ಲಕ್ಷ ಸ್ಥಳಗಳಲ್ಲಿ ಅಳವಡಿಸಲಾದ ಪರದೆಗಳಲ್ಲಿ ಪ್ರಧಾನಿ ಮೋದಿಯವರ ಭಾಷಣವನ್ನು ಪ್ರಸಾರ ಮಾಡಲಾಯಿತು. ಬಿಜೆಪಿ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಷಣವನ್ನು ಆಲಿಸಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದೆಹಲಿಯಲ್ಲಿ ಪಕ್ಷದ ಧ್ವಜ ಹಾರಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next