ಹೊಸದಿಲ್ಲಿ : ”ದೇಶದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಸಮಾಜವನ್ನು ವಿವಿಧ ಗುಂಪುಗಳನ್ನಾಗಿ ಒಡೆಯುವಲ್ಲಿ ವ್ಯಸ್ತವಾಗಿದೆ; ಆದರೆ ಭಾರತೀಯ ಜನತಾ ಪಕ್ಷ ಜನರನ್ನು ಒಗ್ಗೂಡಿಸುತ್ತದೆ, ಸಮಾಜದಲ್ಲಿ ಸಂತಸ, ನೆಮ್ಮದಿಯನ್ನು ಹಂಚುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮೋ ಆ್ಯಪ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದ ಅವರು, ಇದೀಗ ವಿಧಾನಸಭಾ ಚುನಾವಣೆಗಳತ್ತ ಮುಖ ಮಾಡಿರುವ ಐದು ರಾಜ್ಯಗಳಲ್ಲಿ ಜನರು ಪರಸ್ಪರ ಕಚ್ಚಾಡುವಂತೆ ಮಾಡಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಆರೋಪಿಸಿದರು.
ನಿನ್ನೆಯಷ್ಟೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷ “ಭಾರತ್ ತೇರೇ ಟುಕ್‌ಡೇ ಹೋಂಗೆ’ ದುಷ್ಟತೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಕಾಂಗ್ರೆಸ್ ನಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧದ ವಾಕ್ ದಾಳಿಯನ್ನು ಮುಂದುವರಿಸಿ ‘ದೇಶದ ಹಳೇ ಪಕ್ಷವು ಸಮಾಜವನ್ನು ಹೋಳು ಮಾಡುವಲ್ಲಿ ವ್ಯಸ್ತವಾಗಿದೆ’ ಎಂದು ಖಂಡಿಸಿದರು.
‘ಆಂಧ್ರ ಪ್ರದೇಶವನ್ನು ಒಡೆದು ತೆಲಂಗಾಣವನ್ನು ಸೃಷ್ಟಿಸುವ ಮೂಲಕ ಕಾಂಗ್ರೆಸ್ ಪಕ್ಷ ಒಂದೇ ಭಾಷೆ ಮಾತನಾಡುವ ಜನರು ಪರಸ್ಪರ ಕಚ್ಚಾಡುವಂತೆ ಮಾಡಿತು’ ಎಂದು ಮೋದಿ ಟೀಕಿಸಿದರು.
‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಮೂರು ಹೊಸ ರಾಜ್ಯಗಳನ್ನು ರೂಪಿಸಿದ್ದರು. ಆದರೆ ಹಾಗೆ ಮಾಡುವ ಮುನ್ನ ಅವರು ಎಲ್ಲ ಹಿತಾಸಕ್ತಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ಆಂಧ್ರ ಪ್ರದೇಶವನ್ನು ಒಡೆದು ತೆಲಂಗಾಣವನ್ನು ಸೃಷ್ಟಿಸುವ ಮೂಲಕ ಅವುಗಳ ಜನರನ್ನು ಪರಸ್ಪರ ಶತ್ರುಗಳನ್ನಾಗಿ ಮಾಡಿತು’ ಎಂದು ಮೋದಿ ಟೀಕಿಸಿದರು.
‘ರಾಜಕೀಯ ಲಾಭಕ್ಕಾಗಿ ಮಹಾಘಟಬಂಧನ ರೂಪಿಸುವ ವಿರೋಧ ಪಕ್ಷಗಳ ಆಲೋಚನೆ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಪಿಎಂ ಮೋದಿ ಹೇಳಿದರು.
‘ಪರಸ್ಪರ ಹೊಡೆದುಕೊಂಡು ಕಚ್ಚಾಡುವ ವಿರೋಧ ಪಕ್ಷಗಳು ಸಮಯಸಾಧಕತನದಿಂದ ಹೇಗೆ ಕೈ ಜೋಡಿಸಿಕೊಂಡು ಸರಕಾರ ಮಾಡುತ್ತವೆ ಎಂಬುದನ್ನು ನಾವು ಕರ್ನಾಟಕದಲ್ಲಿ ಕಂಡಿದ್ದೇವೆ. ಅದೇ ರೀತಿಯ ಯತ್ನಗಳು ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ನಡೆಯುತ್ತಿವೆ. ಅಂತಿರುವಾಗ ಬಿಜೆಪಿ ಕಾರ್ಯಕರ್ತರು ಈ ರೀತಿಯ ನಾಯಕರ ಹಿನ್ನೆಲೆಗಳನ್ನು ಜನರಿಗೆ ತಿಳಿಸಿ ಜಾಗೃತಿ ಉಂಟು ಮಾಡಬೇಕಿದೆ’ ಎಂದು ಮೋದಿ ಹೇಳಿದರು.