ಕೋಲಾರ: ಇಡೀ ದೇಶದಲ್ಲಿ ಮೋದಿ ಅಲೆ ವಿಪರೀತ ಪ್ರಭಾವ ಬೀರಿದರೆ, ಜಿಲ್ಲೆಯ ಮತದಾರರಿಗೆ ಮೋದಿ ಅಲೆಯ ಮೇಲೆ ಕಿಂಚಿತ್ತೂ ನಂಬಿಕೆ ಇಲ್ಲ ಎನ್ನುವುದು ವಿಧಾನಸಭಾ ಕ್ಷೇತ್ರದ ಫಲಿತಾಂಶದಿಂದ ಮತ್ತೂಮ್ಮೆ ದೃಢಪಟ್ಟಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಆರರಲ್ಲಿ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿ ವಿಫಲವಾಗಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಬಂಗಾರಪೇಟೆ ಸಮೀಪದ ಬೀರಂಡಹಳ್ಳಿಗೆ ಬಂದು ಭರ್ಜರಿ ಭಾಷಣ ಮಾಡಿದ್ದರೂ ಅದು ಮತದಾರರ ಮೇಲೆ ಪರಿಣಾಮ ಬೀರುವಲ್ಲಿ ಅಥವಾ ಮತಗಳಾಗಿ ಮಾರ್ಪಡುವಲ್ಲಿ ಸಫಲವಾಗಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶಾದ್ಯಂತ ಮೋದಿ ಅಲೆ ಕೆಲಸ ಮಾಡಿ ಸಂಸತ್ತಿನಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಬಿಜೆಪಿ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ನ ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಏಳನೇ ಗೆಲುವನ್ನು ಹಿಂದೆಂದೂ ಇಲ್ಲದಂತೆ ಭರ್ಜರಿ 47,850 ಮತಗಳ ಅಂತರದಿಂದ ಸಂಪಾದಿಸಿದ್ದರು. ಎರಡನೇ ಸ್ಥಾನದಲ್ಲಿ ಜೆಡಿಎಸ್‌ನ ಕೋಲಾರ ಕೇಶವ ಇದ್ದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ನಾರಾಯಣಸ್ವಾಮಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಹುಸಿಯಾದ ನಂಬಿಕೆ: ಇದೀಗ ಮೊಟ್ಟ ಮೊದಲ ಬಾರಿಗೆ ಮೋದಿ ಕೋಲಾರ ಜಿಲ್ಲೆಗೆ ಆಗಮಿಸಿ ಭಾಷಣ ಮಾಡಿದ್ದರ ಅಲೆಯಿಂದಾಗಿ ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಹುಸಿಯಾಗಿದೆ. ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮಾಲೂರು, ಕೆಜಿಎಫ್, ಕೋಲಾರ, ಶ್ರೀನಿವಾಸಪುರದಲ್ಲೂ ಬಿಜೆಪಿ ಸೋಲನ್ನು ಅನುಭವಿಸಿದೆ.
ಬಿಜೆಪಿಗೆ ಒಂದೇ ಒಂದು ಸ್ಥಾನವಿಲ್ಲ: ಕೋಲಾರ ಜಿಲ್ಲೆಗೆ ಮೋದಿ ಬರುವುದಕ್ಕಿಂತಲೂ ಮುಂಚೆ 2004ರಲ್ಲಿ ನಡೆದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ ಇದೇ ಬಿ.ಪಿ.ವೆಂಕಟಮುನಿಯಪ್ಪ ಹಾಗೂ ಮಾಲೂರಿನಿಂದ ಎಸ್.ಎನ್.ಕೃಷ್ಣಯ್ಯಶೆಟ್ಟಿ ಗೆಲ್ಲುವ ಮೂಲಕ ಬಿಜೆಪಿಯ ಖಾತೆ ತೆರೆದಿದ್ದರು.
2008 ರ ಚುನಾವಣೆಯಲ್ಲಿಯೂ ಕೆಜಿಎಫ್ನಿಂದ ವೈ.ಸಂಪಂಗಿ ಮತ್ತು ಮಾಲೂರಿನಿಂದ ಎಸ್.ಎನ್.ಕೃಷ್ಣಯ್ಯಶೆಟ್ಟಿ ಗೆಲುವು ಸಂಪಾದಿಸಿ ಎರಡು ಸ್ಥಾನಗಳ ಪರಂಪರೆಯನ್ನು ಮುಂದುವರೆಸಿದ್ದರು. 2013 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಕೆಜಿಎಫ್ ಕ್ಷೇತ್ರದಲ್ಲಿ ವೈ.ರಾಮಕ್ಕರ ಮೂಲಕ ಒಂದು ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೆ, 2018ರಲ್ಲಿ ನಡೆದ ಚುನಾವಣೆ ಮೋದಿ ಬಂದು ಭಾಷಣ ಮಾಡಿದಾಗಲೂ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲದಂತಾಗಿದ್ದು ವಿಪರ್ಯಾಸ.
ಕೋಲಾರ ಜಿಲ್ಲೆಯ ಜನ ಹೀಗೆ ಅಲೆಗಳಿಗೆ ವಿರುದ್ಧವಾಗಿ ಮತ ಚಲಾವಣೆ ಮಾಡುವುದು ಇದೇ ಮೊದಲೇನಲ್ಲ. ಹಿಂದೆ ಇಡೀ ದೇಶದಲ್ಲಿ ಇಂದಿರಾಗಾಂಧಿ ಹೆಸರು ಹೇಳಿ ಯಾರು ಬೇಕಾದರೂ ಚುನಾವಣೆ ಗೆಲ್ಲಬಹುದು ಎನ್ನುವ ವಾತಾವರಣದಲ್ಲಿಯೂ, ಕೋಲಾರ ಜಿಲ್ಲೆಯ ಜನ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದ ಜಿ.ವೈ.ಕೃಷ್ಣನ್‌ರನ್ನು 1984ರಲ್ಲಿ ಸೋಲಿಸಿ ಡಾ.ಜಿ.ವೆಂಕಟೇಶ್‌ರನ್ನು ಜನತಾ ಪಕ್ಷದಿಂದ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಗಮನ ಸೆಳೆದಿತ್ತು.