Advertisement

ಬಾಂಧವ್ಯಕ್ಕೆ ಅಡ್ಡಿ ಬೇಡ’ಗಡಿ ವಿಚಾರಕ್ಕೆ ಸಂಬಂಧ ಕೆಡದಿರಲಿ: ಮೋದಿ

06:00 AM Apr 29, 2018 | |

ವುಹಾನ್‌: ಭಾರತ ಮತ್ತು ಚೀನ ಸಂಬಂಧಕ್ಕೆ ಗಡಿ ತಂಟೆ ಅಡ್ಡ ಬರಬಾರದು. ಅದಕ್ಕಾಗಿ ಈ ಪ್ರದೇಶಗಳಲ್ಲಿ ಎರಡೂ ದೇಶಗಳ ಸೈನಿಕರು ವ್ಯವಸ್ಥಿತವಾದ ಸಂಪರ್ಕ ವ್ಯವಸ್ಥೆ ಹೊಂದಿರಬೇಕು ಎಂದು ಭಾರತದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪರಸ್ಪರ ಒಪ್ಪಿಕೊಂಡಿದ್ದಾರೆ. ವುಹಾನ್‌ನ ಈಸ್ಟ್‌ ಲೇಕ್‌ನಲ್ಲಿ ದೋಣಿ ವಿಹಾರ, ಕೆರೆ ದಂಡೆಯ ಮೇಲಿನ ನಡಿಗೆಯ ವೇಳೆ ಉಭಯ ಮುಖಂಡರು ಶನಿವಾರ ನಡೆಸಿದ ಎರಡನೇ ದಿನದ ಅನೌಪಚಾರಿಕ ಮಾತುಕತೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ.

Advertisement

ಎರಡೂ ರಾಷ್ಟ್ರಗಳ ನಾಯಕರು ತಮ್ಮ ತಮ್ಮ ಸೇನೆಗಳಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ರವಾನೆ ಮತ್ತು ವೈಯಕ್ತಿಕ ಬಾಂಧವ್ಯದ ಮೂಲಕ ಡೋಕ್ಲಾಂನಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್‌ ನಡುವಿನ ಅನೌಪಚಾರಿಕ ಮಾತುಕತೆ ವಿವರಗಳನ್ನು ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ, “ಮಾತುಕತೆ ಮುಕ್ತಾಯದ ವೇಳೆ ಇಬ್ಬರು ನಾಯಕರು ತಮ್ಮ ತಮ್ಮ ಸೇನೆಗಳಿಗೆ ವ್ಯೂಹಾತ್ಮಕ ಸಲಹೆಗಳನ್ನು ನೀಡಲು ನಿರ್ಧರಿಸಿದ್ದಾರೆ. ಎರಡೂ ದೇಶಗಳ ನಡುವೆ ಮತ್ತಷ್ಟು ವಿಶ್ವಾಸ ವೃದ್ಧಿಸುವಂತಾಗಲು ಮತ್ತು ಸೇನೆಗಳ ನಡುವೆ ಹೆಚ್ಚಿನ ಸಂಪರ್ಕ ಸಾಧಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.’ ಎಂದರು. ಆದರೆ ಖಚಿತವಾಗಿ ಡೋಕ್ಲಾಂ ವಿವಾದದ ಬಗ್ಗೆಯೇ ಮಾತುಕತೆ ನಡೆದಿದೆಯೇ ಎಂಬ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಪ್ರಸ್ತಾಪ ಮಾಡಲಿಲ್ಲ.

ಎಲ್ಲಾ ರೀತಿಯ ವಿವಾದಗಳನ್ನು ಶಾಂತಿಯುತವಾಗಿ ಮತ್ತು ಪ್ರೌಢಿಮೆಯಿಂದ ಪರಸ್ಪರ ಮಾತುಕತೆಯಿಂದಲೇ ನಿಭಾಯಿಸಬೇಕು ಎಂಬ ನಿರ್ಣಯಕ್ಕೆ ಮೋದಿ-ಕ್ಸಿ ಬಂದಿದ್ದಾರೆ. ಜತೆಗೆ ಎರಡೂ ದೇಶಗಳ ಬಾಂಧವ್ಯಕ್ಕೆ ತೊಡಕಾಗದಂತೆ ವಿಶ್ವಾಸ ವೃದ್ಧಿಯ ಕ್ರಮಗಳನ್ನು ಘೋಷಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ. 

ಉಗ್ರ ಅಜರ್‌ ಬಗ್ಗೆ ಚರ್ಚೆ ಇಲ್ಲ: ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ ಮುಖ್ಯಸ್ಥ ಮಸೂಜ್‌ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರರ ಪಟ್ಟಿಗೆ ಸೇರಿಸುವಲ್ಲಿ ಚೀನಾದ ಆಕ್ಷೇಪಣೆ ಬಗ್ಗೆ ಪ್ರಶ್ನಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೋಖಲೆ, “ಯಾವುದೇ ನಿಗದಿತ ವಿಷಯಗಳ ಬಗ್ಗೆ ಚರ್ಚೆ ನಡೆಸಲಿಲ್ಲ’ ಎಂದರು. ಇದೇ ವೇಳೆ, ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಸಂಬಂಧಿಸಿ ಭಾರತದ ಮೇಲೆ ಒತ್ತಡ ಹೇರುವುದಿಲ್ಲ ಎಂದೂ ಚೀನಾ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next