ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ, ರಕ್ಷಣಾ ಸಚಿವಾಲಯದ ವ್ಯಾಪ್ತಿಯ ಬರುವ ಜಮೀನು ಸಮೀಕ್ಷೆಯನ್ನು ನಡೆಸಲಾಗಿದೆ. ಒಟ್ಟು 17.78 ಲಕ್ಷ ಎಕರೆ ಭೂಮಿ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿ ಇರುವ ಅಂಶ ಇದರಿಂದ ದೃಢಪಟ್ಟಿದೆ.
ಡ್ರೋನ್, ಉಪಗ್ರಹ ಆಧಾರಿತ ಛಾಯಾಚಿತ್ರಗಳು, ಥ್ರೀ ಡೈಮೆನ್ಶನಲ್ ಮಾಡೆಲಿಂಗ್ ಎಂಬ ಮೂರು ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಈ ಅಧ್ಯಯನ ನಡೆಸಲಾಗಿದೆ.
ದಂಡು (ಕಂಟೋನ್ಮೆಂಟ್) ಪ್ರದೇಶದ ಒಳಗಿನ ಭಾಗದಲ್ಲಿ 1.61 ಲಕ್ಷ ಎಕರೆ ಜಮೀನು, 16.17 ಲಕ್ಷ ಹೆಕ್ಟೇರ್ ಜಮೀನು ದಂಡು ಪ್ರದೇಶದ ಹೊರಗೆ ಇದೆ ಎಂದು ಸರ್ವೇಯಿಂದ ತಿಳಿದು ಬಂದಿರುವುದಾಗಿ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
2018ರ ಅಕ್ಟೋಬರ್‌ನಿಂದ ಈ ಸಮೀಕ್ಷೆ ಆರಂಭಿಸಲಾಗಿತ್ತು. ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 4,900 ಪ್ರದೇಶಗಳಲ್ಲಿ ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಬರುವ ಜಮೀನು ಇದೆ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಇರುವ ಜಮೀನೂ ಇದರಲ್ಲಿ ಸೇರಿದೆ. ಹೀಗಾಗಿ, ಇದು ದೇಶದಲ್ಲೇ ಅತ್ಯಂತ ದೊಡ್ಡ ಸಮೀಕ್ಷೆಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ:ವಾರಾಂತ್ಯ ಕರ್ಫ್ಯೂಗೆ ಭಟ್ಕಳದಲ್ಲಿ ಎರಡನೇ ದಿನವೂ ಉತ್ತಮ ಪ್ರತಿಕ್ರಿಯೆ
ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ) ಸಹಯೋಗದಲ್ಲಿ 3ಡಿ ಮಾಡೆಲಿಂಗ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ದುರ್ಗಮ ಪ್ರದೇಶಗಳಲ್ಲಿ ಇರುವ ಜಮೀನು ಗುರುತಿಸಲಾಗಿದೆ. ರಾಜಸ್ಥಾನದ ಥಾರ್ ಮರುಭೂಮಿ ವ್ಯಾಪ್ತಿಯಲ್ಲಿ ಇರುವ ಜಮೀನನ್ನು ಡ್ರೋನ್ ಆಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗಿದೆ.