ಲಕ್ನೋ/ಬಹರ್ಚಿಯಾ: ರಾಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಕೇಂದ್ರ ಸರಕಾರ 1 ರೂ. ದೇಣಿಗೆ ನೀಡಿದೆ. ಕೇಂದ್ರದ ಪರವಾಗಿ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಿ. ಮುರ್ಮು ಗುರುವಾರ ಈ ದೇಣಿಗೆ ನೀಡಿದ್ದಾರೆ. ಅಯೋಧ್ಯೆ ವಿವಾದದ ಬಗ್ಗೆ ಹಿಂದೂ ಸಂಘಟನೆಗಳ ಪರ ವಾದಿಸಿದ್ದ ಖ್ಯಾತ ನ್ಯಾಯವಾದಿ ಕೆ. ಪರಾಶರನ್ ಅವರ ಹೊಸದಿಲ್ಲಿ ನಿವಾಸದಿಂದಲೇ ಟ್ರಸ್ಟ್ ಕಾರ್ಯಾಚರಿಸಲಿದೆ. ಅದು ಎಲ್ಲ ರೀತಿಯ ದೇಣಿಗೆ, ಕೊಡುಗೆಗಳನ್ನು ಸ್ವೀಕರಿಸಲಿದೆ.
ರಾಮಮಂದಿರ ನಿರ್ಮಾಣ ಕಾರ್ಯ ಎಪ್ರಿಲ್‌ನಿಂದ ಆರಂಭವಾಗಲಿದೆ. ರಾಮನವಮಿ ಅಥವಾ ಅಕ್ಷಯ ತೃತೀಯ ದಿನದಂದು ಕಾಮಗಾರಿ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಟ್ರಸ್ಟಿ ಸ್ವಾಮಿ ಗೋವಿಂದ ದೇವಗಿರಿ ಮಹರಾಜ್ ಹೇಳಿದ್ದಾರೆ.
ಸುಪ್ರೀಂಗೆ ಅರ್ಜಿ?: ಅಯೋಧ್ಯೆಯ ರಾಮಮಂದಿರ ಸ್ಥಳದಿಂದ 25 ಕಿ.ಮೀ. ದೂರದಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಸ್ಥಳ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಪ್ರಶ್ನೆ ಮಾಡಿರುವ ಅಯೋಧ್ಯೆಯ ಮೂಲ ದಾವೆದಾರರು ಸುನ್ನಿ ವಕ್ಫ್ ಮಂಡಳಿ ಮೂಲಕ ಮತ್ತೂಮ್ಮೆ ಸುಪ್ರೀಂ ಮೊರೆಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಫೆ.24ರಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ.
ಮೂಲ ದಾವೆದಾರರ ಪ್ರಕಾರ, ಮಸೀದಿಗೆ ಸರಕಾರ ನೀಡಿರುವ ಜಮೀನು ಬಹಳ ದೂರದಲ್ಲಿದೆ. ನಮಾಜ್ ಮಾಡಲು ಅಲ್ಲಿಯವರೆಗೆ ಹೋಗಲು ಮುಸ್ಲಿಮರಿಗೆ ಅನನುಕೂಲವಾಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸುವ ಸಾಧ್ಯತೆಗಳು ಇವೆ. ಇದೇ ವೇಳೆ ಕೇಂದ್ರ ಸರಕಾರ ಘೋಷಣೆ ಮಾಡಿದ ಟ್ರಸ್ಟ್‌ನಲ್ಲಿ ಹೆಸರು ಸೇರಿಸದೇ ಇರುವುದರಿಂದ ದುಃಖವಾಗಿಲ್ಲ ಎಂದು ರಾಮ ಜನ್ಮಭೂಮಿ ನ್ಯಾಸ್‌ನ ಸದಸ್ಯ ರಾಮ್ ವಿಲಾಸ್ ವೇದಾಂತಿ ಎಂದು ಹೇಳಿದ್ದಾರೆ.