ನವದೆಹಲಿ:ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ವೃದ್ಧಾಶ್ರಮಕ್ಕೆ(ಪೋಷಕರನ್ನು ತೊರೆಯುವ) ಸೇರಿಸಲ್ಪಡುವ ಪೋಷಕರು ಅಥವಾ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಸಾಶನ ಕಾಯ್ದೆಗೆ ತಿದ್ದುಪಡಿ ತರುವ ಸಿದ್ಧತೆಯಲ್ಲಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಹಾಲಿ ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007ರ ಪ್ರಕಾರ ತಿಂಗಳಿಗೆ 10 ಸಾವಿರ ರೂ ಮಾಸಾಶನ ಎಂದು ನಿಗದಿಯಾಗಿದ್ದು, ಆದರೆ ಹೊಸ ತಿದ್ದುಪಡಿ ಕಾಯ್ಷೆ ಪ್ರಕಾರ ತಿಂಗಳಿಗೆ 25ಸಾವಿರದಿಂದ 30 ಸಾವಿರ ರೂಪಾಯಿ ಹಣವನ್ನು ಮಕ್ಕಳು ಪೋಷಕರ ಪಾಲನೆಗೆ ನೀಡಬೇಕಾಗುತ್ತದೆ ಎಂದು ವರದಿ ವಿವರಿಸಿದೆ.
ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007ರ ಕಾಯ್ದೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತಿದ್ದುಪಡಿ ಮಾಡುವ ಸಿದ್ಧತೆಯಲ್ಲಿದೆ. ಕಾಯ್ದೆಯನ್ವಯ ವೃದ್ಧಾಶ್ರಮದಲ್ಲಿರುವ ಹಿರಿಯ (60ವರ್ಷ ಮೇಲ್ಪಟ್ಟ) ನಾಗರಿಕರಿಗೆ ಅಥವಾ ಪೋಷಕರಿಗೆ ಮಕ್ಕಳು ತಿಂಗಳಿಗೆ ನೀಡಲಿರುವ ಮಾಸಾಶನ ಹೆಚ್ಚಳವಾಗಲಿದೆ.
ಸಾಮಾಜಿಕ ನ್ಯಾಯ ಸಚಿವಾಲಯದ ಕಾರ್ಯದರ್ಶಿ ಲತಾ ಕೃಷ್ಣರಾವ್ ಅವರು, ಬಹುತೇಕರ ಆದಾಯ ತಮ್ಮ ಪೋಷಕರಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ನೀಡಲು ಸಾಕಾಗುತ್ತದೆ. ಹಾಗಾಗಿ ಈಗಿರುವ ಮಿತಿಯನ್ನು ನಾವು ಯಾಕೆ ಹೆಚ್ಚಳ ಮಾಡಬಾರದು ಎಂದು ಹೇಳಿದರು.
ಅಲ್ಲದೇ ಹಲವಾರು ಮಕ್ಕಳಿಗೆ ಹೆಚ್ಚಿನ ಮೊತ್ತ ನೀಡುವ ಶಕ್ತಿ ಇದ್ದರೂ ಕಾನೂನಿನ ನೆಪ ಹೇಳಿ ನೀಡುತ್ತಿಲ್ಲ. ಹೀಗಾಗಿ ಈ ಮಳೆಗಾಲದ ಸಂಸತ್ ಅಧಿವೇಶನದಲ್ಲಿಯೇ ಮೊತ್ತ ಹೆಚ್ಚಳದ ಕಾಯ್ದೆಗೆ ತಿದ್ದುಪಡಿ ತರಲಿದ್ದೇವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಕಾನೂನಿನ ಪ್ರಕಾರ ಪೋಷಕರಿಗೆ ನೀಡಬೇಕಾದ ಮಾಸಾಶನ ನೀಡಲು ವಿಫಲರಾದರೆ ಅವರು 3 ತಿಂಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.