Advertisement
ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಮೂರು ವರ್ಷದ ಆಡಳಿತ ಪೂರೈಸುತ್ತಿರುವ ಈ ಕ್ಷಣ ಆಕರ್ಷಿಸಿದಷ್ಟು ಹಿಂದೆ ಯಾವ ಸರ್ಕಾರದ ಪ್ರಥಮ 3 ವರ್ಷಗಳ ಆಡಳಿತವೂ ಆಕರ್ಷಿಸಿರಲಿಲ್ಲ. ಅದಕ್ಕೆ ಕಾರಣ ಈ ಸರ್ಕಾರದ ಬಗ್ಗೆ ಸಾಮಾನ್ಯ ಭಾರತೀಯನಿಗೆ ಇರುವ ಭರವಸೆ ಮತ್ತು ಸರ್ಕಾರ ಆ ಭರವಸೆಯನ್ನು ಈಡೇರಿಸುವ ದಿಕ್ಕಿನಲ್ಲಿ ಇಟ್ಟಿರುವ ಧೃಡವಾದ ಹೆಜ್ಜೆಗಳು. 2014ರ ಹಿಂದೆ ಇದ್ದ 10 ವರ್ಷಗಳ ಸರ್ಕಾರ ನಿಷ್ಕ್ರಿಯತೆ ಹಾಗೂ ಹಗರಣಗಳಿಂದ ಕೂಡಿದ್ದ ಸರ್ಕಾರವೆಂದು ಎಲ್ಲರೂ ಒಪ್ಪುತ್ತಾರೆ. ಆ ನಂತರ ಬಂದಿರುವ ಸರ್ಕಾರದ ಬಗ್ಗೆ ಅಪಾರ ಭರವಸೆಯನ್ನು ಜನತೆ ಇಟ್ಟುಕೊಂಡಿದ್ದು ಅತ್ಯಂತ ಸಹಜ. ಯುಪಿಎ ಒಂದು ಮತ್ತು ಎರಡು ಸರ್ಕಾರಗಳ ನಿಷ್ಕ್ರಿಯತೆ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕ್ರಿಯಾಶೀಲತೆಗೆ ಒಂದು ಹೋಲಿಕೆ.
Related Articles
Advertisement
ಎಲ್ಲರಿಗೂ ತಿಳಿದಿದೆ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ತಲುಪುವುದರಲ್ಲಿ ಬಹಳಷ್ಟು ಭಾಗ ಸೋರಿಕೆಯಾಗುತ್ತಿತ್ತು. ರಾಜೀವ್‌ಗಾಂಧಿಯವರ ‘ಆ ನೂರು ರೂಪಾಯಿಯಲ್ಲಿ 15 ರೂಪಾಯಿ ಮಾತ್ರ ನಿರ್ದಿಷ್ಟ ಉದ್ದೇಶಕ್ಕೆ ತಲುಪುತ್ತದೆ. ಇನ್ನು ಉಳಿದ 85 ರೂಪಾಯಿ ವಿವಿಧ ರೀತಿಯಿಂದ ಸೋರಿಕೆಯಾಗುತ್ತದೆ’ ಎಂಬ ಹೇಳಿಕೆ ಅತ್ಯಂತ ಪ್ರಸಿದ್ಧಿ ಪಡೆದಿತ್ತು. ಆ ಪಿಡುಗಿಗೆ ಇಂದು ಉತ್ತರವಾಗಿ ಬಂದಿದೆ ಜನ – ಧನ ಖಾತೆಗಳಿಗೆ ನೇರ ಹಣ ಪಾವತಿ ಕಾರ್ಯಕ್ರಮ. ಸುಮಾರು 31 ಕೋಟಿ ಕುಟುಂಬಗಳು 59 ಯೋಜನೆಗಳ ಫಲವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಂದ ಪಡೆಯುತ್ತಿದ್ದಾರೆ.
ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಅಂಬಾನಿ, ಬಿರ್ಲಾ, ವಿಜಯ್ ಮಲ್ಯರಂತಹ ಉದ್ಯಮಿಗಳಿಗೆ ಮಾತ್ರ ಎಂಬ ಹತಾಶ ಭಾವನೆ ಎಲ್ಲರ ಮನದಲ್ಲಿ ಮೂಡಿದ್ದಾಗ ಮೋದಿರವರು ಜಾರಿಗೆ ತಂದ ಮುದ್ರಾ ಯೋಜನೆ ಇಂದು ಸಣ್ಣಪುಟ್ಟ ವ್ಯಾಪಾರ ಮಾಡುವ ಕುಟುಂಬಗಳಿಂದ ಹಿಡಿದು ಸಣ್ಣ ಕೈಗಾರಿಕೆ ನಡೆಸುವವರಿಗೂ ಯಾವುದೇ ಆಧಾರವಿಲ್ಲದೇ ಸಾಲ ಪಡೆಯುವಂತಾಗಿದೆ. ಮುದ್ರಾ ಯೋಜನೆಯಿಂದ ದೇಶದ ಸುಮಾರು 7.54 ಕೋಟಿ ಸಣ್ಣ ಉದ್ಯಮಿಗಳು ಪಡೆದಿರುವ ಸಾಲದ ಮೊತ್ತ 3.17 ಲಕ್ಷ ಕೋಟಿರೂಗಳು. ನಮ್ಮ ದೇಶದಲ್ಲಿ ವಿದ್ಯುತ್ ಉತ್ಪಾದನೆ – ವಿದ್ಯುತ್ ಸರಬರಾಜು ಎಂಬುದು ಹಾಸ್ಯಾಸ್ಪದ ಮಟ್ಟದಲ್ಲಿ ಇದ್ದವು. ಇಂದು ಭಾರತ ವಿದ್ಯುತ್ ಉತ್ಪಾದನೆಯಲ್ಲಿ ತನ್ನ ಸಾಮರ್ಥ್ಯ ತೋರಿದೆ. 18453 ವಿದ್ಯುತ್ ಸಂಪರ್ಕ ರಹಿತ ಗ್ರಾಮಗಳ ಪೈಕಿ ಇಂದು 13,000 ಕ್ಕೂ ಹೆಚ್ಚು ಗ್ರಾಮಗಳ ವಿದ್ಯುದ್ದೀಕರಣವಾಗಿದೆ.
ಸ್ವತಃ ಒಂದು ದಿನದ ರಜೆ ತೆಗೆದುಕೊಳ್ಳದೇ ಮೋಜಿಗಾಗಿ -ವಿಶ್ರಾಂತಿಗಾಗಿ ಯಾವುದೇ ಪ್ರವಾಸಿ ತಾಣಗಳಿಗೆ ಹೋಗದೇ ಪ್ರತಿದಿನ 16 ಗಂಟೆ ಕೆಲಸಮಾಡುತ್ತಿರುವ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ಆಡಳಿತ ನಡೆಸುವವರಿಗೆ ಒಂದು ಮಾದರಿಯನ್ನೇ ತಂದಿಟ್ಟಿದ್ದಾರೆ. ಭಾರತದ ಸ್ಥಾನವನ್ನು ಪ್ರಪಂಚದಲ್ಲಿ ಎತ್ತರಕ್ಕೆ ಕರೆದೊಯ್ಯಲು ಅವರು ಮಾಡಿದ ವಿದೇಶಯಾತ್ರೆಗಳು ನಮ್ಮ ತಥಾಗತಿತ ವಿರೋಧಿಗಳಿಂದ ಟೀಕೆಗೊಳಗಾದರೂ ಆ ಪ್ರವಾಸಗಳ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಇಂದು ಪ್ರಪಂಚದಲ್ಲಿ ಉಗ್ರಗಾಮಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಭಾರತದ್ದೇ ದೊಡ್ಡ ಧ್ವನಿ. ಪರಿಸರ ಸಂರಕ್ಷಣೆಗಾಗಿ ರಚಿಸಲ್ಪಟ್ಟಿರುವ ನೀಲಿ ನಕ್ಷೆಯಲ್ಲಿ ಭಾರತದ್ದೇ ದೊಡ್ಡ ಪಾತ್ರ. ಇಂದು ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇಂದು ಭಾರತದ ಯೋಗವನ್ನು ಪ್ರಪಂಚ ಒಪ್ಪಿಕೊಂಡು ಪ್ರತಿವರ್ಷ ಜೂನ್ 21 ವಿಶ್ವಯೋಗ ದಿನವಾಗಿ ಆಚರಿಸಲ್ಪಡುತ್ತಿದೆ. ವಿಶ್ವದ 192 ರಾಷ್ಟ್ರಗಳಲ್ಲಿ ಯೋಗದಿನದ ಆಚರಣೆ ಸಂಭ್ರಮದಿಂದ ಸಡಗರದಿಂದ ನಡೆಯುತ್ತಿದೆ.
ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದ 3 ಕಾರ್ಯಗಳು ಅತ್ಯಂತ ಪರಿಣಾಮಕಾರಿಯಾಗಿ ದೇಶದ ಜನ ಮಾನಸದಲ್ಲಿ ನೆಲೆಸಿದೆ. ನೆರೆರಾಷ್ಟ್ರವಾದ-ಭಾರತಕ್ಕೆ ಹೊರೆಯಾಗಿರುವ ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಚಟುವಟಿಕೆ ನಡೆಸುತ್ತಿದ್ದ ಉಗ್ರಗಾಮಿಗಳ ನೆಲೆಗಳನ್ನು ಸಂಪೂರ್ಣ ನಾಶ ಮಾಡಿದ ಅತ್ಯಂತ ಕರಾರುವಕ್ಕಾದ ಸರ್ಜಿಕಲ್ ಸ್ಟ್ರೈಕ್ ಇಡೀ ವಿಶ್ವವೇ ತಲೆದೂಗುವಂತೆ ಮಾಡಿದ ಕಾರ್ಯ. ತದನಂತರ ಕಳೆದ ನವೆಂಬರ್ 8ರಂದು ಕಪ್ಪುಹಣದ ನಿಯಂತ್ರಣಕ್ಕಾಗಿ ಉಗ್ರಗಾಮಿಗಳ ಚಟುವಟಿಕೆಗಳಿಗೆ ಬಲವಾದ ಪೆಟ್ಟು ನೀಡಲಿಕ್ಕಾಗಿ ಘೋಷಣೆಯಾದ ನೋಟು ಅಮಾನ್ಯಕರಣ. ಅದರ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರತಿಪಕ್ಷಗಳು ಬಹಳ ಪ್ರಯತ್ನ ಪಟ್ಟರೂ ಈ ದೇಶದ ಪ್ರತಿಯೊಬ್ಬ ನಾಗರಿಕ ಸರ್ಕಾರದ ಮಹದುದ್ದೇಶವನ್ನು ಮನಗಂಡು ನೋಟು ಅಮಾನ್ಯಕರಣಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡಿದ್ದು ಮತ್ತೂಂದು ಮಹತ್ವದ ಸಂಗತಿ. ಮೂರನೇಯದಾಗಿ ಇಡೀ ಭಾರತದಾದ್ಯಂತ ಒಂದೇ ತೆರಿಗೆ ಎಂಬ ಸೂತ್ರದಂತೆ ಇನ್ನು ಮುಂದೆ ಜಾರಿಗೆ ಬರುವ ಎಖಖ. ಈ ಮೂರು ಕಾರ್ಯಗಳ ಯಶಸ್ಸಿಗೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ತೋರಿಸಿದ ಧೃಡಸಂಕಲ್ಪ ಮತ್ತು ಅಪಾರ ಅಧ್ಯಯನ ಮಾಡಿ ಜಾರಿಗೆ ತರುವ ಕಾರ್ಯವೈಖರಿ.
ಬಹಳ ಹಿಂದೆ ಗರೀಬಿ ಹಠಾವೋ ಎಂಬುದು ಕೇವಲ ಹುಸಿ ಘೋಷಣೆಯಾಗಿಯೇ ಉಳಿದದ್ದು, ಬಿಟ್ಟಿದ್ದು ಹಿಂದಿನ ಇತಿಹಾಸ. ಇಂದು ನಮ್ಮ ಕೇಂದ್ರ ಸರ್ಕಾರದ ಬಲವಾದ ನಂಬಿಕೆ ಗರೀಬರ ಕಲ್ಯಾಣ. ಪ್ರತಿ ಕಾರ್ಯಕ್ರಮದ ಹಿಂದೆ ಆ ಕಟ್ಟಕಡೆಯ ಬಡವನ ಕಲ್ಯಾಣವಾಗುವುದೇ ಗುರಿ. ಈ ದಿಶೆಯಲ್ಲಿ ಇಂದು ಯಶಸ್ವಿಯಾಗಿ ಜಾರಿಯಲ್ಲಿರುವ ಹಲವು ಕಾರ್ಯಕ್ರಮಗಳು ಈ ಸರ್ಕಾರವನ್ನು ನಿಜವಾದ ಬಡವರ ಬಂಧುವನ್ನಾಗಿಸಿದೆ. ದೇಶದ ಒಬ್ಬೊಬ್ಬ ನಾಗರಿಕನಿಗೂ ಅನಿಸುತ್ತಿದೆ ಇದು ನನ್ನ ಸರ್ಕಾರವೆಂದು. ಇಲ್ಲಿರುವುದು ನನ್ನ ಹಿತವನ್ನು ಕಾಪಾಡಬಲ್ಲ ಸರ್ಕಾರವೆಂದು. ಆ ದಿಶೆಯಲ್ಲಿ 3ನೇ ವರ್ಷದ ಆಚರಣೆ ಮತ್ತೂಮ್ಮೆ ಈ ಬಡವರ ಕಲ್ಯಾಣಕ್ಕಾಗಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಎಲ್ಲರ ಹಿತಕ್ಕಾಗಿ ಕೆಲಸಮಾಡುವ ನಮ್ಮ ಇಚ್ಚೆಯನ್ನು ಮತ್ತೂಮ್ಮೆ ಪ್ರತಿಪಾದಿಸುತ್ತಾ ಮುಂದೆ ಹೆಜ್ಜೆ ಇಡುವ ಕ್ಷಣ.
– ಎಸ್. ಸುರೇಶ್‌ಕುಮಾರ್ ; ಮಾಜಿ ಸಚಿವರು, ಶಾಸಕ