Advertisement

ಮೋದಿ ನಾಮಪತ್ರಕ್ಕೆ ‘ರಿಯಲ್ ಚೌಕಿದಾರ್‌’ ಅನುಮೋದನೆ !

09:04 AM Apr 27, 2019 | Hari Prasad |

ವಾರಣಾಸಿ: ‘ನಾನು ಪ್ರಧಾನಮಂತ್ರಿಯಲ್ಲ ನಿಮ್ಮ ಪ್ರಧಾನ ಸೇವಕ’ ಮತ್ತು ‘ನಾನು ಈ ದೇಶದ ಚೌಕಿದಾರ’ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ನಿಜವಾದ ಚೌಕಿದಾರರೊಬ್ಬರನ್ನು ತಮ್ಮ ನಾಮಪತ್ರಕ್ಕೆ ಸೂಚಕರನ್ನಾಗಿ ಆಯ್ಕೆಮಾಡಿಕೊಂಡಿದ್ದು ವಿಶೇಷವಾಗಿತ್ತು.

Advertisement

ವಾರಣಾಸಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಶುಕ್ರವಾರದಂದು ಇಲ್ಲಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಸೂಚಕರಲ್ಲಿ ಒಬ್ಬರಾಗಿರುವ ಪ್ರೊಫೆಸರ್‌ ಅನ್ನಪೂರ್ಣ ಅವರ ಕಾಲಿಗೆ ಎರಗಿ ಬಳಿಕ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಅನ್ನಪೂರ್ಣ ಅವರು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ ಸಮಾಜ ಸುಧಾರಕ ಮದನ ಮೋಹನ ಮಾಳವೀಯ ಅವರ ಮೊಮ್ಮಗಳಾಗಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿರುವವರಲ್ಲಿ ಒಬ್ಬ ರಿಯಲ್‌ ಚೌಕಿದಾರ ಸಹ ಸೇರಿದ್ದಾರೆ ಎನ್ನುವುದೇ ವಿಶೇಷ. ಇಲ್ಲಿನ ಮಣಿಕರ್ಣಿಕಾ ಘಾಟ್‌ ನಲ್ಲಿ ಕಾವಲುಗಾರರಾಗಿರುವ ಜಗದೀಶ್‌ ಚೌಧರಿ ಎಂಬವರೇ ಈ ರಿಯಲ್‌ ಚೌಕಿದಾರರಾಗಿದ್ದು, ಮೋದಿ ಅವರ ನಾಮಪತ್ರದ ಸೂಚಕರಲ್ಲಿ ಜಗದೀಶ್‌ ಅವರೂ ಕೂಡ ಒಬ್ಬರಾಗಿದ್ದಾರೆ.

ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿರುವ ಇನ್ನಿಬ್ಬರಲ್ಲಿ ರಮಾಶಂಕರ್‌ ಪಟೇಲ್‌ ಎನ್ನುವವರು ಕೃಷಿ ವಿಜ್ಞಾನಿಯಾಗಿದ್ದರೆ ಸುಭಾಷ್‌ ಚಂದ್ರ ಗುಪ್ತಾ ಎಂಬವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದಾರೆ.

ಗುರುವಾರ ವಾರಣಾಸಿಯುದ್ದಕ್ಕೂ ಭರ್ಜರಿ ರೋಡ್‌ ಶೋ ನಡೆಸಿ ಬಳಿಕ ಗಂಗಾರತಿಯಲ್ಲಿ ಭಾಗವಹಿಸಿ ಗಮನಸೆಳೆದಿದ್ದ ಮೋದಿ ಇಂದು ತಮ್ಮ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿಯೂ ವಿಶೇಷತೆಯನ್ನು ಮೆರೆಯುವ ಮೂಲಕ ಗಮನಸೆಳೆದಿದ್ದಾರೆ.

Advertisement

ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ‘ಕಾಶಿಯ ಕೊತ್ವಾಲ’ ಎಂದೇ ಹೆಸರುವಾಸಿಯಾಗಿರುವ ವಾರಣಾಸಿಯಲ್ಲಿರುವ ಪುರಾಣ ಪ್ರಸಿದ್ಧ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next