Advertisement

ರಕ್ಷಣೆಗೆ ಟ್ರಂಪ್‌ ಬಲ : ಸಮರ ಹೆಲಿಕಾಪ್ಟರ್‌ ಖರೀದಿ ಒಪ್ಪಂದಕ್ಕೆ ಮೋದಿ-ಟ್ರಂಪ್‌ ಅಂಕಿತ

11:09 AM Feb 27, 2020 | sudhir |

ಹೊಸದಿಲ್ಲಿ: ಬಹು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಅಮೆರಿಕ ಮತ್ತು ಭಾರತ ನಡುವಿನ ಎಂಎಚ್‌-60 ಮತ್ತು ಅಪಾಚೆ ಸಮರ ಹೆಲಿಕಾಪ್ಟರ್‌ಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದ ಮಂಗಳವಾರ ಅಂತಿಮಗೊಂಡಿದೆ.

Advertisement

ಅಂದಾಜು 21,500 ಕೋ. ರೂ. (3 ಶತಕೋಟಿ ಡಾಲರ್‌) ವೆಚ್ಚದ ಈ ಖರೀದಿ ಒಪ್ಪಂದಕ್ಕೆ ಹೊಸದಿಲ್ಲಿಯ ಹೈದರಾಬಾದ್‌ ಹೌಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ.

ಈ ಮೂಲಕ ಭಾರತೀಯ ಸೇನಾ ಬಲವನ್ನು ಮೇಲ್ದರ್ಜೆಗೇರಿಸುವಲ್ಲಿ ಸತತ ಪ್ರಯತ್ನ ನಡೆಸುತ್ತಿರುವ ಕೇಂದ್ರ ಸರಕಾರವು ತನ್ನ ಯತ್ನದಲ್ಲಿ ಮತ್ತೂಂದು ದಾಪುಗಾಲು ಇರಿಸಿದೆ.

ಒಪ್ಪಂದದ ಪ್ರಕಾರ ಎಂಎಚ್‌-60 ಮಾದರಿಯ 24 ಹೆಲಿಕಾಪ್ಟರ್‌ಗಳು ಭಾರತಕ್ಕೆ ಲಭ್ಯವಾಗಲಿವೆ. ಈ ಖರೀದಿಯ ಒಟ್ಟು ಮೊತ್ತ ಅಂದಾಜು 18,600 ಕೋ.ರೂ. ಎಎಚ್‌ ಅಪಾಚೆ – 64 ಇ ಮಾದರಿಯ 6 ಹೆಲಿಕಾಪ್ಟರ್‌ ಗಳನ್ನೂ ಅಮೆರಿಕವು ಭಾರತಕ್ಕೆ ತಯಾರಿಸಿ ಕೊಡಲಿದ್ದು, ಈ ಖರೀದಿಯ ಮೊತ್ತ ಅಂದಾಜು 5,730 ಕೋ.ರೂ. ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯುದ್ಧ ಹೆಲಿಕಾಪ್ಟರ್‌ಗಳೆಂಬ ಹೆಗ್ಗಳಿಕೆ ಇವುಗಳಿಗಿದೆ.

ಮೂರು ಇತರ ಒಪ್ಪಂದ ಅಂತಿಮ
ಈ ಸಂದರ್ಭದಲ್ಲೇ ಭಾರತ ಮತ್ತು ಅಮೆರಿಕದ ನಡುವೆ ತೈಲೋದ್ಯಮ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಮೂರು ಹೊಸ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳ ಅಧಿಕಾರಿಗಳು ಸಹಿ ಹಾಕಿದರು. ಮಾನಸಿಕ ಆರೋಗ್ಯದ ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಆರೋಗ್ಯ ಇಲಾಖೆಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ವೈದ್ಯಕೀಯ ಪರಿಕರಗಳ ಭದ್ರತೆ ಬಗ್ಗೆ ಭಾರತ ಸೆಂಟ್ರಲ್‌ ಡ್ರಗ್ಸ್‌ ಸ್ಟಾ éಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಶನ್‌ ಮತ್ತು ಅಮೆರಿಕದ ಫ‌ುಡ್‌ ಆ್ಯಂಡ್‌ ಡ್ರಗ್ಸ್‌ ಅಡ್ಮಿನಿಸ್ಟ್ರೇಶನ್‌ ಸಂಸ್ಥೆಗಳ ನಡುವೆ ಮತ್ತೂಂದು ತಿಳಿವಳಿಕೆ ಒಪ್ಪಂದ ಏರ್ಪಟ್ಟಿತು. ತೈಲ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಒಪ್ಪಂದವೊಂದಕ್ಕೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಮತ್ತು ಎಕ್ಸನ್‌ ಮೊಬೈಲ್‌ ಇಂಡಿಯಾ ಎಲ್‌ಎನ್‌ಜಿ ಸಂಸ್ಥೆ ಹಾಗೂ ಅಮೆರಿಕದ ಚಾರ್ಟ್‌ ಇಂಡಸ್ಟ್ರೀಸ್‌ ಇಂಕ್‌ ಸಂಸ್ಥೆಗಳ ಅಧಿಕಾರಿಗಳು ಸಹಿ ಹಾಕಿದರು.

Advertisement

5 ಜಿ ತಂತ್ರಜ್ಞಾನದ ಬಗ್ಗೆ ಚರ್ಚೆ: ಟ್ರಂಪ್‌
ಒಪ್ಪಂದಗಳ ಅನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್‌ ಒಪ್ಪಂದದ ರೂಪುರೇಷೆಗಳನ್ನು ಸ್ಥೂಲವಾಗಿ ವಿವರಿಸಿದರು. ಈ ಬಾರಿಯ ಭಾರತ ಭೇಟಿ ಫ‌ಲಪ್ರದವಾಗಿದೆ. ವಾಣಿಜ್ಯ ವ್ಯವಹಾರಗಳಿಗೆ ಮೋದಿಯವರ ಜತೆ ನಡೆಸಿದ ಚರ್ಚೆಯ ವೇಳೆ ಪೆಸಿಫಿಕ್‌ ವಲಯದಲ್ಲಿ 5ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಿದ್ದೇವೆ. 21,500 ಕೋ. ರೂ. ಮೊತ್ತದ ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಯ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ ಎಂದು ಟ್ರಂಪ್‌ ಹೇಳಿದರು.

ಮಧ್ಯಸ್ಥಿಕೆ ವಹಿಸಲು ಈಗಲೂ ಸಿದ್ಧ
ಕಾಶ್ಮೀರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್‌ ಪುನರುಚ್ಚರಿಸಿದ್ದಾರೆ. ಹೈದರಾಬಾದ್‌ ಹೌಸ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರ ವಿವಾದ ಜ್ವಲಂತ ಸಮಸ್ಯೆಯಾಗಿದ್ದು, ಇದು ಎರಡೂ ಕಡೆಯ ಜನತೆಯ ಪಾಲಿಗೆ ಮಗ್ಗುಲ ಮುಳ್ಳಾಗಿದೆ ಎಂದರು. ಸಮಸ್ಯೆ ನಿವಾರಣೆಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಜತೆಗೆ ಸೂತ್ರವೊಂದನ್ನು ಚರ್ಚಿಸಿ ದ್ದೇನೆ. ಅದರಂತೆ ಅವರು ಗಡಿಯಾಚೆಗಿನ ಭಯೋತ್ಪಾದನೆಗೆ ಲಗಾಮು ಹಾಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಟ್ರಂಪ್‌ ವಿವರಿಸಿದರು.

ವಾಣಿಜ್ಯ ಬಾಂಧವ್ಯ ವೃದ್ಧಿ : ಮೋದಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಭಾರತ ಮತ್ತು ಅಮೆರಿಕ ಬಾಂಧವ್ಯ ಜನರ ಆಶಯ, ಜನಪರ ಕಾಳಜಿಯ ಮೇರೆಗೆ ಮುಂದುವರಿಯುತ್ತಿದೆ ಎಂದರು. ಎರಡೂ ದೇಶಗಳ ನಡುವೆ ಹೊಸದಾಗಿ ಏರ್ಪಟ್ಟಿರುವ ಒಪ್ಪಂದಗಳು ಕೂಡ ಜನಪರ ಕಾಳಜಿ ಮತ್ತು ಜನರ ಆಶಯಕ್ಕೆ ಅನುಗುಣವಾಗಿ ಕಾರ್ಯಗತಗೊಳ್ಳಲಿವೆ ಎಂದರು.

ಹೊಸ ಒಪ್ಪಂದಗಳು ಈ ಬೆಳವಣಿಗೆಯನ್ನು ಮತ್ತೂಂದು ಮಜಲಿಗೆ ಕೊಂಡೊಯ್ಯುವ ಆಶಯವಿದೆ ಎಂದು ತಿಳಿಸಿದರು.

ಸಿಎಎ ಭಾರತಕ್ಕೆ ಬಿಟ್ಟ ವಿಚಾರ
ಸಿಎಎ ಭಾರತಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ನನಗೆ ವಿವಾದದಲ್ಲಿ ಸಿಲುಕುವುದು ಇಷ್ಟವಿಲ್ಲ. 2 ದಿನಗಳ ಭಾರತ ಭೇಟಿಯ ಸೊಬಗನ್ನು ಒಂದು ಉತ್ತರದಿಂದ ಕಳೆದುಕೊಳ್ಳುವುದು ನನಗೆ ಬೇಕಿಲ್ಲ ಎಂದರು.

ಧಾರ್ಮಿಕ ಸ್ವಾತಂತ್ರ್ಯ
ಮೋದಿ ಜತೆಗೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಸಲಾಗಿದ್ದು, ಭಾರತದ ಮುಸ್ಲಿಮರನ್ನು ಸಹಮತಕ್ಕೆ ಪಡೆದುಕೊಂಡೇ ಮುನ್ನಡೆಯುವುದಾಗಿ ಅವರು ಹೇಳಿದ್ದಾರೆ. ಅದರಿಂದ ಅವರೊಬ್ಬ ಧಾರ್ಮಿಕ ಸ್ವಾತಂತ್ರ್ಯ ಬಯಸುವ ವ್ಯಕ್ತಿ ಎಂಬುದು ಸ್ಪಷ್ಟವಾಗಿದೆ ಎಂದು ಟ್ರಂಪ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next