ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ. “ಅವರಪ್ಪನಾಣೆ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಯುವ ಕಾಂಗ್ರೆಸ್ ಘಟಕ ಏರ್ಪಡಿಸಿದ್ದ ವಿಸ್ತೃತ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವ ನಾಶ ಮಾಡಲು ಹೊರಟವರು. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಬ್ರಿಟೀಷರಂತೆ ಬಿಜೆಪಿ ಒಡೆದು ಆಳುವ ನೀತಿಯಲ್ಲಿ ನಂಬಿಕೆ ಇಟ್ಟಿದೆ ಎಂದು ಟೀಕಿಸಿದರು. ಅನಂತಕುಮಾರ್ ಹೆಗಡೆ ಸಂವಿಧಾನ ಸುಡುವುದಾಗಿ ಹೇಳಿದ್ದಾರೆ. ನಾನೇನಾದರೂ ಪ್ರಧಾನಿಯಾಗಿದ್ದರೆ ಅವರನ್ನು ಜೈಲಿಗೆ ಹಾಕಿಸುತ್ತಿದ್ದೆ ಎಂದರು.
ದೇಶದಲ್ಲಿ ಮೋದಿಯವರು ಪ್ರಧಾನಿಯಾದ ಮೇಲೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ. ಪ್ರತಿಯೊಬ್ಬ ಭಾರತೀಯನೂ ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಬೇಕು. ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಯೋಗ್ಯ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ. ಜರ್ಮನಿಯ ಹಿಟ್ಲರ್‌ನಂತೆ ಬಿಜೆಪಿಯವರು ಫ್ಯಾಸಿಸ್ಟ್ ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ಗೆ ಸಮ ಸಮಾಜದ ಮೇಲೆ ನಂಬಿಕೆ ಇದೆ. ಬಿಜೆಪಿಯವರು ಸುಳ್ಳಿನ ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಸತ್ಯ ಹೇಳಿದರೆ ಜನ ಬೆಂಬಲಿಸುತ್ತಾರೆ. ನಾನು ಮೂಲ ಕಾಂಗ್ರೆಸ್ಸಿಗನಲ್ಲ. ಸಮಾಜವಾದಿ ಚಳವಳಿಯಿಂದ ಬಂದವನು. ಎಂದಿಗೂ ನನ್ನ ಸಿದ್ದಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದರು.
ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಪ್ರಕರಣವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಪಾಕಿಸ್ತಾನಕ್ಕೆ ಭಯ ಹುಟ್ಟಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. 1971ರಲ್ಲಿ ಪಾಕಿಸ್ತಾನ ವಿರುದಟಛಿ ಯುದ್ದ ಮಾಡಿ ಇಂದಿರಾಗಾಂಧಿ ಬಾಂಗ್ಲಾದೇಶವನ್ನು ಬೇರೆ ಮಾಡಿದ್ದರು. ಆಗ ವಾಜಪೆಯಿ ಅವರು ಇಂದಿರಾಗಾಂಧಿಯನ್ನು ದುರ್ಗಿ ಎಂದು ಹೊಗಳಿದ್ದರು. ಪ್ರಧಾನಿ ಮೋದಿಯವರಿಗೆ ಇದೆಲ್ಲ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.