Advertisement

ರೈತರ ಸಾಲ ಮನ್ನಾಕ್ಕೆ ಮೋದಿ ಹಿಂದೇಟು

12:39 PM Aug 29, 2017 | Team Udayavani |

ಹುಬ್ಬಳ್ಳಿ: ಕಳೆದ ಲೋಕಸಭಾ ಚುನಾವಣೆಗೆ ನೆರವಾದ ಉದ್ಯಮಿಗಳ ಬೃಹತ್‌ ಸಾಲ ಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ದುರದೃಷ್ಟಕರ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ ಹೇಳಿದರು. 

Advertisement

ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು,  2014ರ ಲೋಕಸಭಾ ಚುನಾವಣೆಯಲ್ಲಿ ನೆರವಾದ ಅಂಬಾನಿ ಹಾಗೂ ಅದಾನಿಯವರ 6000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ ನರೇಂದ್ರ ಮೋದಿ ರೈತರ  ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.

ಬರದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರೈತರ ನೆರವಿಗೆ ಬರುತ್ತಿಲ್ಲ ಎಂದರು. ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಜೋಡಣೆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ನರೇಂದ್ರ ಮೋದಿ ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರು ಪ್ರಧಾನಿ ಮೇಲೆ ಒತ್ತಡ ಹೇರುತ್ತಿಲ್ಲ ಎಂದು  ನುಡಿದರು. 

ಮೋದಿ ದ್ವಿಮುಖ ನೀತಿ: ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಯುಪಿಎ ಸರ್ಕಾರ ಜಿಎಸ್‌ಟಿ ಜಾರಿಗೆ ತರಲು ನಿರ್ಧರಿಸಿದಾಗ ಕಾಂಗ್ರೆಸ್‌ ಹಣ ಮಾಡಿಕೊಳ್ಳಲು ಜಿಎಸ್‌ಟಿ ಜಾರಿಗೆ ತರುತ್ತಿದೆ ಎಂದು ಆಗ ಗುಜರಾತ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಆರೋಪ ಮಾಡಿದ್ದರು.

ಈಗ ಜಿಎಸ್‌ಟಿಯಿಂದ ಯಾರು ಹಣ ಮಾಡಿಕೊಳ್ಳುತ್ತಿದ್ದಾರೆಂಬುದನ್ನು ಮೋದಿ ಸ್ಪಷ್ಟಪಡಿಸಲಿ ಎಂದರು. ನೋಟು ಅಮಾನ್ಯಗೊಳಿಸಿದ ನಂತರ ಎಷ್ಟು ಕಪ್ಪು ಹಣ ಪತ್ತೆಯಾಗಿದೆ ಎಂಬುದನ್ನು ಪ್ರಧಾನಿ ಮೋದಿ ಬಹಿರಂಗಪಡಿಸಲಿ. ಕಪ್ಪು ಹಣವನ್ನು ಪತ್ತೆ ಮಾಡಲು 500ರೂ ಹಾಗೂ 1000ರೂ. ಗಳ ನೋಟುಗಳನ್ನು ಅಮಾನ್ಯ ಮಾಡಲಾಯಿತು. 

Advertisement

ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟಾಯಿತು ಎಂದು ವಿವರಿಸಿದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ ಈವರೆಗೆ ಕೇವಲ 5-6 ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next