ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಟ್ಯೂಬ್ ಲೈಟ್ ಗೆ ಹೋಲಿಸಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನಿಗೆ ಮೋದಿ ಕಾಲೆಳೆದಿದ್ದಾರೆ.
ಲೋಕಸಭೆಯಲ್ಲಿ ಇಂದು ರಾಷ್ಟ್ರಪತಿಗಳಿಗೆ ಧನ್ಯವಾದ ತಿಳಿಸುವ ಭಾಷಣದ ವೇಳೆ ಪ್ರಧಾನಿ ಮೋದಿ ಭಾಷಣ ಮಾತನಾಡಿದರು. ಈ ವೇಳೆ ಸ್ವಲ್ಪ ತಡವಾಗಿ ಮಾತನಾಡಲು ಎದ್ದು ನಿಂತ ರಾಹುಲ್ ಗಾಂಧಿಯವರನ್ನು ಮೋದಿ ಟ್ಯೂಬ್ ಲೈಟ್ ಗೆ ಹೋಲಿಸಿದರು.
“ಕಳೆದ ಸುಮಾರು 30-40 ನಿಮಿಷದಿಂದ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಆದರೆ ಅಲ್ಲಿಯತನಕ ಕರೆಂಟ್ ತಲುಪಲು ಇಷ್ಟು ಸಮಯ ಬೇಕಾಯಿತು. ಕೆಲವು ಟ್ಯೂಬ್ ಲೈಟ್ ಗಳು ಹಾಗೆಯೇ” ರಾಹುಲ್ ಗಾಂಧಿಯವರನ್ನು ಮೋದಿ ಛೇಡಿಸಿದರು.
ಭಾಷಣ ವೇಳೆ ರಾಹುಲ್ ಗಾಂಧಿಯ ‘ಲಾಠಿ’ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ಆರು ತಿಂಗಳಲ್ಲಿ ಯುವಕರು ಮೋದಿಗೆ ಲಾಠಿಯಲ್ಲಿ ಹೊಡೆಯುತ್ತಾರೆ ಎಂದು ಕಾಂಗ್ರೆಸ್ ನಾಯಕರೋರ್ವರು ಹೇಳಿದ್ದಾರೆ. ಹೀಗಾಗಿ ನಾನು ಇನ್ನು ಮುಂದೆ ಸೂರ್ಯ ನಮಸ್ಕಾರವನ್ನು ಹೆಚ್ಚಿಸುತ್ತೇನೆ. ಇದಿರಿಂದ ನನ್ನ ಬೆನ್ನು ಇನ್ನಷ್ಟು ಬಲಿಷ್ಠವಾಗಬಹುದು ಮತ್ತು ಲಾಠಿಯ ಏಟನ್ನು ತಡೆಯಬಹುದು ಎಂದರು.