Advertisement

ಮೋದಿ ಹುಟ್ಟುಹಬ್ಬಕ್ಕೆ ಉಂಗುರ, ಚೀತಾ ಆಕರ್ಷಣೆ!

11:00 AM Sep 17, 2022 | Team Udayavani |

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬ. ದೇಶಾದ್ಯಂತ ಆಚರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಾರಿ ಪ್ರಧಾನಿಯವರ ಹುಟ್ಟುಹಬ್ಬ ಆಚರಣೆ ಎಂದಿನಂತಿರದು. ಹೋಮ ಹವನ, ಕೇಕ್‌ ಸಹ ಇರದು. ಇದಕ್ಕೆ ಬದಲಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವತ್ತ ಬಿಜೆಪಿ ಚಿತ್ತ ಹರಿಸಿದೆ.

Advertisement

56 ಇಂಚ್‌ ತಾಲಿ,
56 ಪದಾರ್ಥ
ದಿಲ್ಲಿಯ ಕನೌ°ತ್‌ನಲ್ಲಿರುವ ಹೊಟೇಲ್‌ವೊಂದರಲ್ಲಿ 56 ಇಂಚಿನ ತಾಲಿಯಲ್ಲಿ 56 ಪದಾರ್ಥಗಳನ್ನು ಇರಿಸಿ ವಿಶೇಷವಾಗಿ ನೀಡಲಾಗುತ್ತದೆ. ಗ್ರಾಹಕರು ಸಸ್ಯಾಹಾರ ಅಥವಾ ಮಾಂಸಾಹಾರ ಊಟವನ್ನು ಆಯ್ದುಕೊಳ್ಳಬಹುದು. ಪ್ರಧಾನಿ ಮೋದಿ ಅವರು ನಮ್ಮ ದೇಶದ ಹೆಮ್ಮೆಯಾಗಿದ್ದು, ಇವರ ಹುಟ್ಟುಹಬ್ಬದ ನಿಮಿತ್ತ 56 ಇಂಚಿನ ತಾಲಿಯಲ್ಲಿ ಊಟ ನೀಡುತ್ತೇವೆ ಎಂದಿದ್ದಾರೆ ಹೊಟೇಲ್‌ ಮಾಲಕರು.

ಆರೋಗ್ಯ ತಪಾಸಣೆ ಕಾರ್ಯಕ್ರಮ
ರಾಜ್ಯ ಆರೋಗ್ಯ ಇಲಾಖೆ ರಾಜ್ಯಾ ದ್ಯಂತ ಸೆ. 17ರಿಂದ ಅ. 2ರ ವರೆಗೆ ಜನರ ಆರೋಗ್ಯ ತಪಾಸಣೆ, ಚಿಕಿತ್ಸೆ, ರಕ್ತದಾನ ಶಿಬಿರ, ಕ್ಷಯ ಮುಕ್ತ ಕಾರ್ಯಕ್ರಮ ಸೇರಿದಂತೆ ವಿವಿಧ ಅಭಿಯಾನ ನಡೆಸಲಿದೆ. ಹಾಗೆಯೇ, ಅಮೃತ ಸರೋವರಗಳ ಸ್ವತ್ಛತಾ ಅಭಿಯಾನ ದಡಿ 1,000 ಸರೋವರಗಳ ಸ್ವತ್ಛತೆ, ಮನೆ-ಮನೆ ಅಭಿಯಾನದ ಮೂಲಕ 50,000 ಮನೆಗಳಲ್ಲಿ ನೀರಿನ ಸಂರಕ್ಷಣೆ, 1,000 ಅಂಗವಿಕಲರಿಗೆ ಕೃತಕ ಅಂಗಗಳ ದಾನ, ವರ್ಷದ ಅವಧಿಗೆ 500 ಕ್ಷಯ ರೋಗಿಗಳ ದತ್ತು, ಲಸಿಕೆ ಕೇಂದ್ರ ದಲ್ಲಿ ಸೇವಾ ಚಟುವಟಿಕೆ, ಪರಿಸರ ಸಂರಕ್ಷಣೆಗೆ 50,000 ಸಸಿಗಳನ್ನು ನೆಡಲಾಗುತ್ತಿದೆ.

ಬರಲಿವೆ 8 ಚೀತಾ
ಭಾರತದ ಕಾಡುಗಳಿಂದ ಕಣ್ಮರೆ ಯಾಗಿದ್ದ ಚೀತಾಗಳು ಮೋದಿ ಅವರ ಹುಟ್ಟುಹಬ್ಬದ ದಿನವೇ ಮತ್ತೆ ಭಾರತದ ಕಾಡು ಸೇರಲಿವೆ. ಇದಕ್ಕಾಗಿ ಈಗಾಗಲೇ ನಮೀಬಿಯಾಗೆ ಬಿ747 ಜಂಬೋ ಜೆಟ್‌ ವಿಮಾನವನ್ನು ಕಳುಹಿಸ ಲಾಗಿದೆ. ಒಟ್ಟಾರೆಯಾಗಿ 8 ಚೀತಾ ಗಳು ಬರಲಿದ್ದು, ಮಧ್ಯಪ್ರದೇಶದ ಕುನು ರಾಷ್ಟ್ರೀಯ ಪಾರ್ಕ್‌ನಲ್ಲಿ ವಾಸಿಸಲಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಇವು ಗಳನ್ನು ಕಾಡಿಗೆ ಬಿಡುಗಡೆ ಮಾಡುವರು.

ನವಜಾತ ಶಿಶುಗಳಿಗೆ ಚಿನ್ನದ ಉಂಗುರ
ತಮಿಳುನಾಡು ಬಿಜೆಪಿ ಘಟಕದ ವತಿಯಿಂದ ಶನಿವಾರ ಹುಟ್ಟುವ ಮಕ್ಕಳಿಗೆ ತಲಾ 2 ಗ್ರಾಂ. ತೂಕದ ಚಿನ್ನದ ಉಂಗುರ ಕೊಡಲು ನಿರ್ಧರಿಸಲಾಗಿದೆ. ಚೆನ್ನೈಯ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದು ಕೇಂದ್ರ ಸಚಿವ ಎಲ್‌.ಮುರುಗನ್‌ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ದಿನಕ್ಕೆ 10 ರಿಂದ 15 ಮಕ್ಕಳು ಜನ್ಮತಾಳುತ್ತವೆ. ಇವರಿಗೆ ಉಂಗುರ ನೀಡುತ್ತೇವೆ ಎಂದಿದ್ದಾರೆ.

Advertisement

ಸೇವಾ ಪಾಕ್ವಾಡ
ಭಾರತೀಯ ಜನತಾ ಪಕ್ಷ(ಬಿಜೆಪಿ)ವತಿಯಿಂದ ಸೆ.17ರಿಂದ ಅ.2ರ ವರೆಗೆ 15 ದಿನಗಳ ಕಾಲ ಸೇವಾ ಪಾಕ್ವಾಡ ಎಂಬ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಾವುದೇ ರೀತಿಯ ಪೂಜೆ, ಹೋಮ, ಹವನ ಮತ್ತು ಕೇಕ್‌ ಕತ್ತರಿಸುವಂತಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ. ಇದರ ಬದಲಾಗಿ ಕೇಂದ್ರ ಸರಕಾರದ ಕೆಲಸಗಳ ಪ್ರಚಾರ ಮತ್ತು ರಕ್ತದಾನದಂಥ ಸೇವಾ ಕೆಲಸಗಳನ್ನು ಮಾಡಬೇಕು ಎಂದಿದ್ದಾರೆ.

ನಮೋ ಆ್ಯಪ್‌ನಲ್ಲಿ ಶುಭಾಶಯ
ಪ್ರಧಾನಿ ನರೇಂದ್ರ ಮೋದಿಯವರ ನಮೋ ಆ್ಯಪ್‌ನಲ್ಲಿ ವಿಡಿಯೋ ಅಥವಾ ಫೋಟೋ ಹಾಕುವ ಮೂಲಕ ಶುಭಾಶಯ ಹೇಳಬಹುದು. ಅಂದರೆ, ವಿಡಿಯೋದಲ್ಲಿ ಶುಭಾಶಯವನ್ನು ರೆಕಾರ್ಡ್‌ ಮಾಡಿ ಹಾಕಬಹುದು. ಅಲ್ಲದೆ, ಇದೇ ಆ್ಯಪ್‌ನಲ್ಲಿ ಫ್ಯಾಮಿಲಿ ಇ ಕಾರ್ಡ್‌ ಎಂಬ ಹೊಸ ರೀತಿಯ ಫೀಚರ್‌ ಅನ್ನೂ ಅಳವಡಿಸಲಾಗಿದೆ. ಈ ಕಾರ್ಡ್‌ನಲ್ಲಿ ತಮ್ಮ ಎಲ್ಲ ಕುಟುಂಬದ ಸದಸ್ಯರ ಹೆಸರುಗಳನ್ನು ಸೇರಿಸಬಹುದಾಗಿದೆ.

ನಾಲ್ಕು ಕಡೆ ಸಮಾರಂಭ
ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ನಾಲ್ಕು ಕಡೆ ಸಮಾರಂಭಗಳಲ್ಲಿ ಭಾಗಿಯಾಗುವರು. ಮೊದಲಿಗೆ ಮಧ್ಯಪ್ರದೇಶಕ್ಕೆ ತೆರಳಿ ಅಲ್ಲಿ ಚೀತಾಗಳನ್ನು ಬಿಡುಗಡೆ ಮಾಡುವರು. ಅಲ್ಲೇ ಮಹಿಳಾ ಸ್ವಸಹಾಯ ಸಂಘದವರ ಜತೆ ಮಾತುಕತೆ ನಡೆಸುವರು. ವಿಶ್ವಕರ್ಮ ಜಯಂತಿ ಅಂಗವಾಗಿ ಐಟಿಐ ವಿದ್ಯಾರ್ಥಿಗಳ ಮೊದಲ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಲಿದ್ದು, 40 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಸಂಜೆ ರಾಷ್ಟ್ರೀಯ ಸರಕು ಸಾಗಣೆ ನೀತಿಯನ್ನು ಬಿಡುಗಡೆ ಮಾಡಿ ಮಾತನಾಡುವರು.

Advertisement

Udayavani is now on Telegram. Click here to join our channel and stay updated with the latest news.

Next