Advertisement

ಮತ್ತೆ ಮೋದಿ ಪ್ರಧಾನಿಯಾಗ್ತಾರೆ: ರೇಣು ವಿಶ್ವಾಸ

10:08 AM Mar 12, 2019 | |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ಒಳಗೊಂಡಂತೆ ರಾಜ್ಯದ 22 ಕ್ಷೇತ್ರ, ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರುವುದು, ನರೇಂದ್ರ ಮೋದಿಯವರೇ ಪ್ರಧಾನಿಯಾಗುವುದು ಸೂರ್ಯ-ಚಂದ್ರರು ಇರುವಷ್ಟೇ ಸತ್ಯ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಜಗತ್ತೇ ಮೆಚ್ಚಿದೆ. ನೋಟು ಅಮಾನ್ಯ, ಜಿಎಸ್‌ಟಿಯಂತಹ ದಿಟ್ಟ ನಿರ್ಧಾರ, ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮತ್ತು ಕಾರ್ಯಕರ್ತರ ಸಂಘಟನೆಯ ಆಧಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಜೊತೆಗೆ ಮೋದಿ ಮತ್ತೂಮ್ಮೆ ಪ್ರಧಾನಿ ಆಗುತ್ತಾರೆ ಎಂದು ಹೇಳಿದರು.

ಈ ಬಾರಿ ನರೇಂದ್ರ ಮೋದಿ ವರ್ಸಸ್‌ ಮಹಾ ಘಟಬಂಧನ್‌ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದರೆ ಮಹಾಘಟಬಂಧನ್‌ದಲ್ಲಿ ನಾಯಕತ್ವವೇ ಇಲ್ಲ. ರಾಹುಲ್‌ ಗಾಂಧಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು… ಯಾರು ಪ್ರಧಾನಿ ಅಭ್ಯರ್ಥಿ ಎಂಬ ಸ್ಪಷ್ಟತೆಯೇ ಇಲ್ಲ. ಈ ನಡುವೆ ಅವಕಾಶವಾದಿ ರಾಜಕಾರಣ ಮಾಡುವ ಕುಮಾರಸ್ವಾಮಿಯವರು ದೇವೇಗೌಡರು ಮತ್ತೂಮ್ಮೆ ಪ್ರಧಾನಿ ಆಗಬೇಕು ಎನ್ನುತ್ತಿದ್ದಾರೆ. ಆದರೆ ದೇಶದ ಎಲ್ಲಾ ಕಡೆ ಬಿಜೆಪಿ ಮತ್ತು ನರೇಂದ್ರ ಮೋದಿ ಪರ ವಾತಾವರಣ ಇದೆ. ನರೇಂದ್ರ ಮೋದಿಯವರೇ ಮತ್ತೂಮ್ಮೆ ಪ್ರಧಾನಿ ಆಗುವುದು ಸತ್ಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ಬಗ್ಗೆ ಪ್ರತಿ ಪಕ್ಷಗಳು ಟೀಕೆ ಮಾಡುತ್ತಿದ್ದವು. ಪುಲ್ವಾಮಾ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಜಗತ್ತಿನ ಎಲ್ಲಾ ದೇಶಗಳು ಭಾರತದ ಪರವಾಗಿ ನಿಂತವು. ಪಾಕಿಸ್ತಾನ ಏಕಾಂಗಿಯಾಗಿತ್ತು. ಅದು ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದು ಮತ್ತು ಬೇರೆ ಬೇರೆ ದೇಶದ ನಾಯಕರೊಂದಿಗೆ ಹೊಂದಿರುವ ವಿಶ್ವಾಸದ ಫಲ. ಮನಮೋಹನ್‌ ಸಿಂಗ್‌ ಅಧಿಕಾರವಧಿಯಲ್ಲಿ ಭಾರತವನ್ನು ನೋಡುತ್ತಿದ್ದಂತಹ ರೀತಿ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಬದಲಾಗಿದೆ ಎಂದು ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆಯೇ ಇಲ್ಲ. ರಾಹುಲ್‌ ಗಾಂಧಿ ಒತ್ತಡಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಇದ್ದೇವೆ. ಲೋಕಸಭಾ ಚುನಾವಣೆ ನಂತರ ಬೆಂಬಲ ಕೊಡುವುದಿಲ್ಲ ಎಂದು ಅನೇಕ ಕಾಂಗ್ರೆಸ್‌ ಶಾಸಕರು, ಮುಖಂಡರು ಹೇಳಿದ್ದಾರೆ. ಬಿಜೆಪಿಯೊಂದಿಗೆ ಸರ್ಕಾರ ನಡೆಸಿದಾಗ ಕೊಡುತ್ತಿದ್ದಂತಹ ಗೌರವ ಕೊಡುತ್ತಿಲ್ಲ. ಕಾಂಗ್ರೆಸ್‌ನವರು ಎಲ್ಲದಕ್ಕೂ ಒತ್ತಡ ಹಾಕುತ್ತಾರೆ. ಲೋಕಸಭಾ ಚುನಾವಣೆ ನಂತರ ಬೆಂಬಲ ನೀಡುವುದಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

Advertisement

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಜಿ. ಮಲ್ಲಿಕಾರ್ಜುನಪ್ಪ, ಮೂರು ಬಾರಿ ಜಿ.ಎಂ. ಸಿದ್ದೇಶ್ವರ್‌ ಅವರಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಸಿದ್ದೇಶ್ವರ್‌ ಮನೆಗೆ ಹೋಗುತ್ತಾನೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಅವರು ಹಿರಿಯರು. ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ಆ ರೀತಿ ಮಾತನಾಡುವುದು ಸರಿಯಲ್ಲ. ಸಿದ್ದೇಶ್ವರ್‌ ಕ್ಷೇತ್ರದ ಜನರ ಜೊತೆ ಹೊಂದಿರುವ ಸಂಬಂಧ ಮತ್ತು ಕಾರ್ಯಕರ್ತರ ಸಂಘಟನೆಯಿಂದ ನಾಲ್ಕನೇ ಬಾರಿಗೂ ಜಿ.ಎಂ. ಸಿದ್ದೇಶ್ವರ್‌ ಅವರೇ ಗೆಲ್ಲಲಿದ್ದಾರೆ. ಬಿಜೆಪಿಯಲ್ಲಿ ನಾನೇ ಅಭ್ಯರ್ಥಿ ಎಂದು ಹೇಳುವ ಸಂಸ್ಕೃತಿ ಇಲ್ಲ. ಹೊನ್ನಾಳಿಯಿಂದ ಸಿದ್ದೇಶ್ವರ್‌ ಗೆಲುವಿಗೆ ಎಷ್ಟು ಕಾಣಿಕೆ ಕೊಡಲಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌ ಭಟ್‌, ರಾಜನಹಳ್ಳಿ ಶಿವಕುಮಾರ್‌, ಗುರುರಾಜ್‌, ಎಳನೀರು ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next