ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಹಲವಾರು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನಪ್ರಿಯರಾಗಿದ್ದು, ಇದೀಗ ಮತ್ತೊಂದು ರಾಜಕೀಯ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ 6 ವರ್ಷ 64 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ನರೇಂದ್ರ ಮೋದಿ ಅವರು ಎರಡನೇ ಅವಧಿ ಸೇರಿದಂತೆ ಆರು ವರ್ಷ 79 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು, ಇನ್ನೂ ನಾಲ್ಕು ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರಿಯುವ ಮೂಲಕ ದೇಶದಲ್ಲಿ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಲಿದ್ದಾರೆ.
ಜವಾಹರಲಾಲ್ ನೆಹರು, ಇಂದಿರಾಗಾಂಧಿ ಹಾಗೂ ಡಾ.ಮನಮೋಹನ್ ಸಿಂಗ್ ನಂತರ ಭಾರತದಲ್ಲಿ ದೀರ್ಘಾವಧಿವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಲ್ಕನೇ ವ್ಯಕ್ತಿ ಮೋದಿಯಾಗಲಿದ್ದಾರೆ.
2014ರ ಮೇ 26ರಂದು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ 2019ರ ಮೇ 30ರಂದು 2ನೇ ಬಾರಿಗೆ ಪ್ರಧಾನಿ ಗದ್ದುಗೆ ಏರಿದ್ದರು.
ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಅತೀ ದೀರ್ಘಾವಧಿವರೆಗೆ ಪ್ರಧಾನಿಯಾಗಿದ್ದರು. ಇವರು ಸುಮಾರು 17 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ನಂತರ ಮಗಳು ಇಂದಿರಾಗಾಂಧಿ ಎರಡು ಅವಧಿಯಲ್ಲಿ 11 ವರ್ಷ ಹಾಗೂ ನಂತರ ನಾಲ್ಕುವರೆ ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಡಾ.ಮನಮೋಹನ್ ಸಿಂಗ್ ಅವರು ಎರಡು ಅವಧಿಗೆ ಒಟ್ಟು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದರು.
ನಂತರ ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ಯಾರೊಬ್ಬರೂ ಪೂರ್ಣಾವಧಿ ಅಧಿಕಾರ ಅನುಭವಿಸಲಿಲ್ಲ. ಮೊರಾರ್ಜಿ ದೇಸಾಯಿ( 1977ರ ಮಾರ್ಚ್ 24ರಿಂದ 1979ರಿಂದ ಜುಲೈ 28), ಚರಣ್ ಸಿಂಗ್ (1979ರ ಜುಲೈ 28ರಿಂದ 1980ರ ಜನವರಿ 14), ವಿ.ಪಿ.ಸಿಂಗ್ (1989ರ ಡಿಸೆಂಬರ್ 2ರಿಂದ 1991ರ ಜೂನ್ 21), ಎಚ್ ಡಿ ದೇವೇಗೌಡ (1996ರ ಜೂನ್ 1ರಿಂದ 1997ರ ಏಪ್ರಿಲ್ 21), ಇಂದ್ರಕುಮಾರ್ ಗುಜ್ರಾಲ್ (1997ರ ಏಪ್ರಿಲ್ 21ರಿಂದ 1998ರ ಮಾರ್ಚ್ 19).
ಈ ನಿಟ್ಟಿನಲ್ಲಿ ಆಗಸ್ಟ್ 15ರ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ನರೇಂದ್ರ ಮೋದಿ ಅವರು ಅತೀ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಲಿದ್ದಾರೆ.