Advertisement

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

07:38 PM Dec 05, 2021 | Team Udayavani |

ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜೀನಾಮೆ ನೀಡುವುದಾಗಿ ನಾನು ಘೋಷಿಸಿದ್ದೆ, ಆದರೆ ಮೋದಿ ಅವರು ಬೇಡ ಎಂದಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ರಾಜೀನಾಮೆ ವಿಚಾರದ ಬಗ್ಗೆ ವಿವರಿಸಿದ್ದಾರೆ.

Advertisement

ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ಬಿಜೆಪಿಗೆ ಬಹುಮತ ಬಂದಿತ್ತು, ಆಗ ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ದೆಹಲಿಗೆ ಬರುವಂತೆ ಪತ್ರ ಬರೆದಿದ್ದರು. ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ನಾನು ಘೋಷಿಸಿದಂತೆ ರಾಜೀನಾಮೆ ನೀಡುತ್ತಿದ್ದೇನೆ. ಆದ್ದರಿಂದ ನನ್ನ ರಾಜೀನಾಮೆಯನ್ನು ತೆಗೆದುಕೊಳ್ಳಿ ಎಂದು ಹೇಳಿದ್ದೆ. ಆಗ ಪ್ರಧಾನಿ ಮೋದಿ ಅವರು ಚುನಾವಣೆ, ರಾಜಕೀಯದಲ್ಲಿ ಇಂಥ ಮಾತುಗಳು ಹೇಳುವುದು ಸಹಜ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವೊಲಿಸಿದ್ದರು ಎಂದು ಹೇಳಿದರು.

ರೈತನ ಮಗನಾದ ನನ್ನ ರಾಜಕೀಯ ಬೆಳವಣಿಗೆಯನ್ನು ನನ್ನ ಜತೆ ಇದ್ದವರೇ ಸಹಿಸಲಿಲ್ಲ. ನನ್ನ ಬಗ್ಗೆ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಅದರಲ್ಲಿ ನಾನು ದೇಶದ ಅಭಿವೃದ್ಧಿಗೆ ಏನು ಮಾಡಿದ್ದೇನೆ ಎಂದು ಪ್ರಶ್ನಿಸುವವರಿಗೆ ಉತ್ತರ ಸಿಗಲಿದೆ. ನಾನು ದೆಹಲಿಗೆ ಹೋದಾಗ ಒಂದು ಲೋಟ ಕಾಫಿ ಕೊಡಲಿಲ್ಲ. ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಹೋದಾಗ ನನ್ನ ಜತೆ ಇದ್ದವರೇ ಮೇಲೆ ಕುಳಿತಿದ್ದರು. ನಂತರ ರಾಜೀನಾಮೆ ನೀಡಿ ಹೊರ ಬಂದಾಗ ಯಾರೂ ಇರಲಿಲ್ಲ. ಇದು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

ನಾನು ಪ್ರಧಾನಿಯಾಗಿದ್ದಾಗ ನನ್ನ ಅಭಿವೃದ್ಧಿ ಬಗ್ಗೆ ನನ್ನ ಪಕ್ಷದವರೇ ಪ್ರಚಾರ ಮಾಡಲಿಲ್ಲ. ಇದರಿಂದ ಆಡಳಿತದಲ್ಲಿದ್ದರೂ ನಮ್ಮ ಪಕ್ಷ ಎರಡು ಸ್ಥಾನಕ್ಕೆ ಕುಸಿಯಿತು. ನಂತರ ನನಗೆ ರಾಜಕೀಯ ಶಕ್ತಿ ತುಂಬಿದ್ದು ಹಾಸನ ಮತ್ತು ಮಂಡ್ಯ ಜಿಲ್ಲೆಗಳು. 2023-2024 ರ ಚುನಾವಣೆಗಳಲ್ಲೂ ನಾನು ಸುಮ್ಮನೆ ಕೂರುವುದಿಲ್ಲ. ನನ್ನ ಹೋರಾಟದ ಸಂಕಲ್ಪವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ. 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿಯೂ ಜನರ ತೀರ್ಪಿಗಾಗಿ ಮುಂದೆ ಹೋಗಲಿದ್ದು, ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ನಾವೇ ಹೋರಾಡುತ್ತೇವೆ. ನಮ್ಮ ಪಕ್ಷವನ್ನು ನಾಶ ಮಾಡುತ್ತೇವೆ ಎನ್ನುವವರ ವಿರುದ್ಧ ಎದ್ದು ನಿಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಹುದ್ದೆಗಳನ್ನು ನಿರ್ವಹಿಸುತ್ತಿದ್ದಾಗ ಆಗಿರುವ ವ್ಯತ್ಯಾಸಗಳನ್ನು ಗಮನಿಸಿದ್ದೇನೆ. ಪ್ರಧಾನಿ ಮೋದಿ ಅವರ ವಿಚಾರದಲ್ಲಿ ನಾನು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಾತನಾಡುವವರು ಸಂಸತ್‌ನಲ್ಲಿ ಗೋದ್ರಾ ಹತ್ಯಾಕಾಂಡದ ಬಗ್ಗೆ ನಾನು ಏನು ಮಾತನಾಡಿದ್ದೇನೆ ಎಂಬುದನ್ನು ದಾಖಲೆಗಳನ್ನು ತೆಗೆದು ನೋಡಲಿ ಕಿಡಿಕಾರಿದರು.

Advertisement

ಮೈತ್ರಿ ಬಗ್ಗೆ ನಾಳೆ ನಿರ್ಧಾರ: ದೇವೇಗೌಡ
ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ.6 ಕ್ಷೇತ್ರಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next