ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರದಿಂದ ಕರ್ನಾಟಕದಲ್ಲಿ ಮತಯಾತ್ರೆ ಪ್ರಾರಂಭಿಸಲಿದ್ದು, ಮಾ. 25ರಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ಗುರುವಾರ ತಡರಾತ್ರಿಯೇ ಶಾ ಬೆಂಗಳೂರಿಗೆ ಆಗಮಿಸಿದ್ದು, ಶುಕ್ರವಾರ ಬೆಳಗ್ಗೆ 9ಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಉಪಾಹಾರ ಸೇವಿಸಲಿದ್ದಾರೆ. ಇಲ್ಲಿ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಳಿಕ ಕೊಮ್ಮಘಟ್ಟದಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾ ದಿಲ್ಲಿಗೆ ತೆರಳಲಿದ್ದಾರೆ.
ಮಾ. 25ರಂದು ಪ್ರಧಾನಿ ಮೋದಿ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಸಮಾರೋಪದಲ್ಲಿ ಭಾಗಿಯಾಗಲಿದ್ದು, ಸುಮಾರು 10 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದೆ.
ಮಾ. 25ರ ರಾತ್ರಿ ಅಮಿತ್ ಶಾ ಬೀದರ್‌ಗೆ ಆಗಮಿಸಲಿದ್ದಾರೆ. 26ರಂದು ಗೊರಟಾ ಹುತಾತ್ಮ ಸ್ಮಾರಕ ಹಾಗೂ ಪಟೇಲ್ ಸ್ಮಾರಕ ಉದ್ಘಾಟಿಸಿ ಬಹಿರಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 26ರ ಸಂಜೆ ಮತ್ತೆ ಬೆಂಗಳೂರಿಗೆ ಆಗಮಿಸುವ ಶಾ “ಬೆಂಗಳೂರು ಹಬ್ಬ’ದ ಸಮಾರೋಪದ ಜತೆಗೆ ವಿಧಾನಸೌಧದ ಎದುರು ಸ್ಥಾಪಿಸಿರುವ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸುವರು. ರಾತ್ರಿ 8.30ಕ್ಕೆ ರಾಜ್ಯ ಬಿಜೆಪಿ ನಾಯಕರ ಜತೆಗೆ ಸಭೆ ನಡೆಸಲಿದ್ದು, ಚುನಾವಣ ದೃಷ್ಟಿಯಿಂದ ಇದು ಅತ್ಯಂತ ಮಹತ್ವ ಲಭಿಸಿದೆ. 27ರಂದು ಬೆಳಗ್ಗೆ ಶಾ ದಿಲ್ಲಿಗೆ ವಾಪಸಾಗಲಿದ್ದಾರೆ.