Advertisement

ಕರಾವಳಿ ತೀರದಲ್ಲಿ ಸಾವಯವ ಗೊಬ್ಬರ ಸಮುದ್ರಕಳೆ ಬೆಳೆಯಲು ಮೋದಿ ಸಲಹೆ

08:59 AM Nov 02, 2017 | |

ಬೆಳ್ತಂಗಡಿ: ಕರಾವಳಿ ತಟದಲ್ಲಿ ಸೀವೀಡ್‌ (ಸಮುದ್ರಕಳೆ) ಬೆಳೆಸಿ; ಗೊಬ್ಬರವಾಗಿಸಿ ಎಂದು ಉಜಿರೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ರೈತ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ನಿಟ್ಟಿನಲ್ಲಿ ಸಮುದ್ರಕಳೆ ಎಂದರೇನು ಹಾಗೂ ಮೋದಿ ಹೇಳಿದ್ದೇನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Advertisement

ಯೂರಿಯಾ ಬಳಕೆ ಕಡಿಮೆ ಮಾಡಿ
ಇನ್ನೈದು ವರ್ಷಗಳಲ್ಲಿ ದೇಶ ಸ್ವಾತಂತ್ರ್ಯಗಳಿಸಿ 75 ವರ್ಷಗಳಾಗುತ್ತವೆ. ಆಗ ನಮ್ಮ ದೇಶ‌ದಲ್ಲಿ ಕೃಷಿಗೆ ಯೂರಿಯಾ ರಾಸಾಯನಿಕದ ಬಳಕೆ ಶೇ. 50ರಷ್ಟಾದರೂ ಕಡಿಮೆಯಾಗಬೇಕು. ಹಾಗಾದಾಗ ಭೂಮಿಯ ಮೇಲೆ ರಾಸಾಯನಿಕಗಳ ಪ್ರಮಾಣ ಕಡಿಮೆಯಾಗುತ್ತದೆ. ಭೂಮಿಯ ರಕ್ಷಣೆಗೆ ಸಹಕಾರಿಯಾಗುತ್ತದೆ. ಯೂರಿಯಾ ಬಳಕೆ ಕಡಿಮೆ ಮಾಡಿ ಎಂದೊಡನೆ ನಮ್ಮಲ್ಲಿ ಉತ್ಪಾದನಾ ಕೊರತೆಯಾಗಿದೆ ಎಂದರ್ಥವಲ್ಲ. ರಾಸಾಯನಿಕ ಗೊಬ್ಬರ ಖಾತೆ ಸಚಿವ ಅನಂತ್‌ ಕುಮಾರ್‌ ಅವರು ಚೆನ್ನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ರಸಗೊಬ್ಬರಗಳ ಕೊರತೆಯಾಗಿಲ್ಲ. ಆದರೆ ಕಡಿಮೆ ಬಳಸುವುದರಿಂದ ಭೂಮಿಯ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಮೋದಿ ಹೇಳಿ¨ª‌ರು.

ಸೀವೀಡ್‌ ಬಳಸಿ
ನಿಮ್ಮದು ಕರಾವಳಿ ತೀರ. ಆದ್ದರಿಂದ ಇಲ್ಲಿ ಸೀವೀಡ್‌ (ಸಮುದ್ರಕಳೆ, ಕಡಲಕಳೆ) ಗಿಡ ಬೆಳೆಸಿ. ಇದರಿಂದ ಸಾವಯವ ಗೊಬ್ಬರ ತಯಾರಿಸಿದಂತಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ದೊರೆತರೆ ರಾಸಾಯನಿಕ ಬಳಕೆ ಕಡಿಮೆ ಮಾಡಬಹುದು. ಆದರೆ ಇದಕ್ಕೆಲ್ಲ ಸರಕಾರವನ್ನು ಕಾಯುತ್ತಾ ಕೂರಲಾಗದು. ನಾನು ಕೂಡ ಆಡಳಿತಶಾಹಿಗೆ ಇದನ್ನು ಹೇಳಿಲ್ಲ. ನೀವು ಮಾಡಿ. ಸರಕಾರದ ಕಾನೂನು, ಕಟ್ಟಳೆಗಳಿಗೆ ಕಾಯಬೇಡಿ. ನಿಮ್ಮಿಂದ ಸಾಧ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಮೋದಿ ಹೇಳಿದ್ದರು.

ಏನಿದು ಸಮುದ್ರ ಕಳೆ?
ಸಮುದ್ರದಲ್ಲಿ ಬೆಳೆಯುವ ಪಾಚಿ ಮಾದರಿಯ ಕಳೆಗಿಡ. ಕೆಲವು ತಳಿಗಳು ಸ್ವತಂತ್ರವಾಗಿ ತೇಲುತ್ತವೆ. ಕೆಲವು ಮುಳುಗಿ ಬೆಳೆಯುತ್ತವೆ. ಕಡಲಕಳೆ ಸಾಮಾನ್ಯವಾಗಿ ತೀರಕ್ಕೆ ಹತ್ತಿರವಿರುವ ಸಮುದ್ರದ ಭಾಗವನ್ನು ಮತ್ತು ಆ ಮರಳಿನಲ್ಲಿ ಮರಳು ಅಥವಾ ಚಿಗುರುಗಳಿಗಿಂತಲೂ ನದಿ ಸೇರುವ ಸಮುದ್ರ ತೀರದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ತೀರದಿಂದ ಸಮುದ್ರಕ್ಕೆ ಹಲವಾರು ಮೈಲುಗಳವರೆಗೆ ವಿಸ್ತರಿಸಬಹುದು. ಆಳವಾದ ಜೀವಂತ ಕಡಲಕಳೆಗಳು ಕೆಂಪು ಪಾಚಿಗಳ ಕೆಲವು ಪ್ರಭೇದಗಳಾಗಿವೆ. 2011ರ ಇಂಡೋನೇಷಿಯಾ 10 ದಶಲಕ್ಷ ಟನ್‌ಗಳಷ್ಟು ಕಡಲಕಳೆ ಉತ್ಪಾದಿಸಿತ್ತು. ವಿಶ್ವದ ಅತಿದೊಡ್ಡ ಸೀವೀಡ್‌ ನಿರ್ಮಾಪಕನಾಗುವ ಮೂಲಕ ಫಿಲಿಪೈನ್ಸನ್ನು ಮೀರಿಸಿತು.

ಆಹಾರವಾಗಿಯೂ ಸೀವೀಡ್‌ ಅನ್ನು ವಿದೇಶೀ ಕರಾವಳಿ ಜನರು ಸೇವಿಸುತ್ತಾರೆ. ಜಪಾನ್‌, ಚೀನ, ಕೊರಿಯಾ, ತೈವಾನ್‌ , ಆಗ್ನೇಯ ಏಷ್ಯಾ, ಬ್ರೂನಿ, ಸಿಂಗಾಪುರ್‌, ಥೈಲ್ಯಾಂಡ್‌, ಬರ್ಮಾ, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಫಿಲಿಪ್ಪೀನ್ಸ್‌, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾ, ಬೆಲೀಜ್‌, ಪೆರು, ಚಿಲಿ, ಕೆನಡಿಯನ್‌ ಮಾರಿಟೈಮ್ಸ್‌, ಸ್ಕಾಂಡಿನೇವಿಯಾ, ಸೌತ್‌ ವೆಸ್ಟ್‌ ಇಂಗ್ಲೆಂಡ್‌, ಐರ್ಲೆಂಡ್‌, ವೇಲ್ಸ್‌, ಕ್ಯಾಲಿಫೋರ್ನಿಯಾ ಮತ್ತು ಸ್ಕಾಟ್ಲೆಂಡ್‌ನ‌ಲ್ಲಿ ಇದನ್ನು ಚಟ್ನಿ, ಸೂಪ್‌, ಸಿಹಿತಿಂಡಿ, ರೊಟ್ಟಿ, ಪಾನೀಯ ಇತ್ಯಾದಿ ಆಹಾರವಾಗಿ ಬಳಸಲಾಗುತ್ತದೆ. ಹೈಡ್ರೋಕೊಲೋಯಿಡ್ಸ್‌ ಎಂದು ಕರೆಯಲಾಗುವ ಕಡಲಕಳೆ ಆಹಾರ ಪದಾರ್ಥದ ಸೇರ್ಪಡೆಗಳಾಗಿ ವಾಣಿಜ್ಯಿಕವಾಗಿಯೂ ಪ್ರಾಮುಖ್ಯತೆ ಪಡೆದಿವೆ. ಸಾಸ್‌ಗಳು, ಮಾಂಸ , ಮೀನು ಉತ್ಪನ್ನಗಳಲ್ಲಿ, ಡೈರಿ ವಸ್ತುಗಳು ಮತ್ತು ಬೇಯಿಸಿದ ಸರಕುಗಳ ಸಂರಕ್ಷಕವಾಗಿ ಬಳಸಲಾಗುತ್ತದೆ.

Advertisement

ಗೊಬ್ಬರವಾಗಿಯೂ ಬಳಕೆ  
ಪೈಂಟ್‌, ಟೂತ್‌ಪೇಸ್ಟ್‌, ಸೌಂದರ್ಯ ಪ್ರಸಾಧನಗಳಲ್ಲಿ ಕೂಡ ಸೀವೀಡ್‌ ಬಳಸಲಾಗುತ್ತದೆ. ಡಯಟ್‌ಗೆ ಸಂಬಂಧಿಸಿದ ಮಾತ್ರೆಗಳನ್ನು ತಯಾರಿಸುತ್ತಾರೆ. ಆಹಾರ, ಜೈವಿಕ ಇಂಧನವಾಗಿ, ಔಷಧ ಅಷ್ಟೇ ಅಲ್ಲ ಸಾವಯವ ಗೊಬ್ಬರವಾಗಿ ಇದನ್ನು ಬಳಸಲಾಗುತ್ತದೆ. ಕಾಂಪೋಸ್ಟ್‌ ಮಾಡಿ ಗೊಬ್ಬರವಾಗಿಸಿ ಗಿಡಗಳಿಗೆ ಹಾಕಬಹುದು. ಇದರಲ್ಲಿ ತೇವಾಂಶ ಇರುವ ಕಾರಣ ಗಿಡಗಳಿಗೆ ಉತ್ತಮ ನೀರು ಮತ್ತು ಗೊಬ್ಬರವಾಗಿ ಬಳಕೆಯಾಗಬಲ್ಲದು. ನೀರಿನಿಂದ ಅನಪೇಕ್ಷಿತ ಪೋಷಕಾಂಶಗಳನ್ನು ತೆಗೆದುಹಾಕಲು ಇದು ಅವಕಾಶ ನೀಡುತ್ತದೆ.

ಭೂಮಿ ತಾಯಿ ಉಳಿಸಿ
ಧರ್ಮಸ್ಥಳದ ವತಿಯಿಂದ ಭೂಮಿ ತಾಯಿಯನ್ನು ಉಳಿಸುವ ಯೋಜನೆ ಮದರ್‌ ಅರ್ತ್‌ಗೆ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈಗಾಗಲೇ ಕೆರೆಗಳ ಹೂಳೆತ್ತುವಿಕೆ, ಪರಿಸರ ರಕ್ಷಣೆ, ಗಿಡಮರ ನೆಡುವ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಸಮುದ್ರ ಕಳೆ ಗಿಡದ ಕಡೆಗೆ ಆಕರ್ಷಿತರಾದರೆ ಅಚ್ಚರಿಯಿಲ್ಲ.

ಅವಕಾಶಗಳ ಹೆಬ್ಟಾಗಿಲು
ಸಮುದ್ರದಲ್ಲಿ ಕಲ್ಲಿಗೆ ಅಂಟಿಕೊಂಡು ಬೆಳೆ ಯುವ ಪಾಚಿ ಜಾತಿಯ ಸೀವೀಡ್‌ಗಳಿವೆ. ಸಮುದ್ರ ದಾಳದಲ್ಲಿ ಮರದಷ್ಟು ಎತ್ತರ ಬೆಳೆಯುವ ಪ್ರಭೇದ ಗಳೂ ಇವೆ. ಸಮುದ್ರ ತೀರದಲ್ಲಿ ಹಗ್ಗ ಕಟ್ಟಿ ಅಥವಾ ಬಿದಿರಿನ ಗಳ ಇಟ್ಟು ಕೃತಕವಾಗಿ ಬೆಳೆಯಲು ಸಾಧ್ಯವಿದೆ. ವೈವಿಧ್ಯಮಯ ಸಮುದ್ರ ಕಳೆಗಳು ಇರುವ ಕಾರಣ ಇದು ಅವಕಾಶಗಳ ಹೆಬ್ಟಾಗಿಲು. ಸಂಪಾದನೆಗೆ ದಾರಿ. ವಾಣಿಜ್ಯ ದೃಷ್ಟಿಯಿಂದಲೂ ಅನುಕೂಲ. ಸರಿಯಾದ ಮಾರ್ಗದರ್ಶನ ದೊರೆತರೆ ನಿಜಕ್ಕೂ ಯಶಸ್ವಿಯಾಗಬಲ್ಲದು. ಡಾ| ಬಿ. ಯಶೋವರ್ಮ, ಮಣ್ಣಿನಲ್ಲಿ  ಬೆಳೆಯುವ ಪಾಚಿಗಳ ಕುರಿತು ಪಿಎಚ್‌ಡಿ ಸಂಶೋಧನೆ ಮಾಡಿದವರು.

ಗ್ರಾಮಾಭಿವೃದ್ಧಿ ಮೂಲಕ ಚಿಂತನೆ
ದೇಶದ ಗುಜರಾತ್‌, ಕೇರಳ, ತಮಿಳುನಾಡಿನ ಕೆಲವೆಡೆ ಸಮುದ್ರಕಳೆ ಬೆಳೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಕಡಲತೀರದ ಆಸಕ್ತ ಸ್ವಸಹಾಯ ಸಂಘದ ಸದಸ್ಯರಿಗೆ ಈ ಕುರಿತು ತರಬೇತಿ ನೀಡಲಾಗುವುದು. ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾದರೆ ನಂತರ ಇದನ್ನು ವಿಸ್ತೃತ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗುವುದು. 
ಡಾ| ಎಲ್‌.ಎಚ್‌. ಮಂಜುನಾಥ್‌, ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next