ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಹಂತವನ್ನು ತಲುಪಿದೆ. ಲಾಕ್‌ಡೌನ್ ಆರಂಭವಾಗಿ ತಿಂಗಳಿಗೂ ಅಧಿಕ ಸಮಯವಾಗಿದೆ. ಇದೇ ವೇಳೆಯಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ಇಪತ್ತೇಳು ಸಾವಿರದ ಗಡಿದಾಟಿಯಾಗಿದೆ. ಸ್ವಾಸ್ಥ್ಯ ಪರಿಣತರ ಪ್ರಕಾರ, ಈಗಿನ ದೈನಂದಿನ ಸಾಂಕ್ರಾಮಿಕ ಬೆಳವಣಿಗೆ ವೇಗವು ಇದೇ ರೀತಿ ಇದ್ದರೆ, ಮೇ ಮಾಸಾಂತ್ಯಕ್ಕೆ ಸೋಂಕಿತರ ಸಂಖ್ಯೆ ಅಪಾರವಾಗಲಿದೆ. ಆದಾಗ್ಯೂ ಭಾರತವು ಸೂಕ್ತ ಸಮಯದಲ್ಲಿ ಪಾಲಿಸಿದ ಸುರಕ್ಷತಾ ಕ್ರಮಗಳಿಂದಾಗಿ ಬಹಳ ಪ್ರಯೋಜನವಾಗಿದೆ ಎನ್ನುವುದು ವೇದ್ಯವಾಗುತ್ತಿದೆ.
ಇದರ ಹೊರತಾಗಿಯೂ, ಮುಂದಿನ ದಿನಗಳು ಹೇಗಿರಲಿವೆ ಎಂಬ ಆತಂಕವೂ ಎದುರಾಗಿದೆ. ಕೇವಲ ದೈಹಿಕ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೇ, ಆರ್ಥಿಕ ಸ್ವಾಸ್ಥ್ಯದ ದೃಷ್ಟಿಯಿಂದಲೂ ಇದೊಂದು ಪ್ರಮುಖ ಪ್ರಶ್ನೆಯೇ ಸರಿ. ಆದಾಗ್ಯೂ, ಅನ್ಯ ದೇಶಗಳಿಗೆ ಹೋಲಿಸಿದರೆ ಭಾರತ ತ್ವರಿತವಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿತು ಎನ್ನುವುದು ಶ್ಲಾಘನೀಯ ವಿಚಾರವೇ. ಹಾಗೆಂದು ಅಪಾಯ ದೂರವಾಗಿದೆ ಎಂದೇನೂ ಅಲ್ಲ. ಮುಂದಿನ ದಿನಗಳಲ್ಲಿ ಭಾರತ ತನ್ನ ಹೋರಾಟದ ತೀವ್ರತೆಯನ್ನು ಹೆಚ್ಚಿಸುವುದು ನಿಸ್ಸಂಶಯ. ಈ ವಿಚಾರದಲ್ಲಿ ಕೇಂದ್ರ-ರಾಜ್ಯಗಳ ಸಹಭಾಗಿತ್ವ ಮೆಚ್ಚುಗೆಗೆ ಅರ್ಹ.
ಆರಂಭದಿಂದಲೂ ಪ್ರಧಾನಿ ಮೋದಿ ರಾಜ್ಯಗಳ ಮುಖ್ಯ ಮಂತ್ರಿಗಳ ಜತೆ ಚರ್ಚೆ ನಡೆಸುತ್ತಾ, ದೇಶವನ್ನುದ್ದೇಶಿಸಿ ಮಾತನಾಡುತ್ತಾ ಬಂದಿದ್ದಾರೆ. ಇನ್ನು ಮನ್‌ಕೀ ಬಾತ್‌ನಲ್ಲೂ ಕೋವಿಡ್ ವಿಚಾರವಾಗಿ ಸಲಹೆಗಳನ್ನು ನೀಡುತ್ತಿದ್ದಾರೆ. ಈಗ ಮನ್ ಕೀ ಬಾತ್‌ನಲ್ಲಿ ಅವರು ಈ ದೀರ್ಘ ಹೋರಾಟಕ್ಕೆ ದೇಶವಾಸಿಗಳು ಮಾನಸಿಕವಾಗಿ ತಯಾರಾಗಿರಬೇಕು ಎಂದು ಹೇಳಿ ಮನೋಬಲ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಈ ಹೋರಾಟ ಇಂದು-ನಾಳೆ ಮುಗಿಯುವಂಥದ್ದಲ್ಲ, ಎನ್ನುವ ಅಂಶಕ್ಕೆ ಪ್ರಧಾನಿಗಳು ಒತ್ತುಕೊಟ್ಟಿದ್ದಾರೆ.
ಈ ಹೋರಾಟದಲ್ಲಿ ಯಶಸ್ವಿಯಾಗಬೇಕೆಂದರೆ ನಾವು ನಮ್ಮ ಜೀವನ ಶೈಲಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿಕೊಳ್ಳಲೇ ಬೇಕಿದೆ. ಏಕೆಂದರೆ, ಲಾಕ್‌ಡೌನ್‌ಗೂ ಒಂದು ಮಿತಿ ಇದೆ. ಅದು ಮುಗಿಯಲೇಬೇಕು. ಹೀಗಾಗಿ, ಲಾಕ್‌ಡೌನ್ ತೆರವಾದ ಅನಂತರವೂ ನಾವು ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೋವಿಡ್ ವೈರಸ್‌ನ ಸಂಕಷ್ಟ ದೀರ್ಘಕಾಲ ಇರಲಿದೆ ಎಂಬ ಸೂಚನೆ ನೀಡಿದೆ. ಈ ಕಾರಣಕ್ಕಾಗಿಯೇ, ಅನೇಕ ದೇಶಗಳು ಲಾಕ್‌ಡೌನ್‌ನ ನಡುವೆಯೇ ಆರ್ಥಿಕ ಗತಿ ವಿಧಿಗಳಿಗೆ ನಿಧಾನಕ್ಕೆ ಮರು ಚಾಲನೆ ನೀಡಲಾರಂಭಿಸಿವೆ. ಭಾರತವೂ ಸಹ ವಿವಿಧ ಕ್ಷೇತ್ರಗಳಿಗೆ ವಿನಾಯಿತಿ ನೀಡಿದೆ. ಈಗಲೂ ಅನೇಕ ಕ್ಷೇತ್ರಗಳು ಮತ್ತೆ ಹಳಿಗೆ ಮರಳುವ ಅಗತ್ಯವಿದೆ. ಆದರೆ, ಇದರಿಂದಾಗಿ ಸಾಂಕ್ರಾಮಿಕ ಹರಡುವಿಕೆ ಹೆಚ್ಚುವ ಅಪಾಯವೂ ಇದೆ. ಈ ನಿಟ್ಟಿನಲ್ಲಿ, ಆರ್ಥಿಕ ಚಟುವಟಿಕೆಗಳು ಪುನಾರಂಭವಾದ ನಂತರವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ನೈರ್ಮಲ್ಯ ಪಾಲನೆಯಂಥ ಸುರಕ್ಷತಾ ವಿಧಾನಗಳನ್ನು ನಾವೆಲ್ಲರೂ ಚಾಚೂ ತಪ್ಪದೇ ಪಾಲಿಸಬೇಕಿದೆ.