ಹೊಸದಿಲ್ಲಿ: ಶ್ರೀಲಂಕಾ ಸರಕಾರವು ಅಲ್ಲಿರುವ ಅಲ್ಪಸಂಖ್ಯಾಕ ತಮಿಳರ ಹಿತಾಸಕ್ತಿಯನ್ನು ಕಾಪಾಡಬೇಕು ಮತ್ತು ಸಮಾನತೆ, ನ್ಯಾಯ ಹಾಗೂ ಘನತೆ ಪಡೆಯುವ ಅವರ ಇಚ್ಛೆಯನ್ನು ಪೂರೈಸ ಬೇಕು ಎಂದು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಭಾರತ ಭೇಟಿಯಲ್ಲಿರುವ ರಾಜಪಕ್ಸೆ ಅವರೊಂದಿಗೆ ಶನಿವಾರ ಮಾತುಕತೆ ನಡೆ ಸಿದ ಪ್ರಧಾನಿ ಮೋದಿ, ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ದೀರ್ಘಾವಧಿಯಿಂದ ಇತ್ಯರ್ಥವಾಗದೇ ಉಳಿದಿರುವ ತಮಿಳರ ವಿಚಾರ ಕುರಿತು ಮೋದಿ ಪ್ರಸ್ತಾವಿ ಸಿದ್ದು, ಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಜಾರಿ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ. ಈ ತಿದ್ದುಪಡಿ ಜಾರಿ ಯಾದರೆ, ಲಂಕಾದಲ್ಲಿರುವ ತಮಿಳ ರಿಗೂ ಅಧಿಕಾರ ಸಿಗಲಿದೆ.
ಇದಲ್ಲದೆ, ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಹಕಾರ, ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸಂಬಂಧಗಳ ವೃದ್ಧಿ, ಲಂಕಾದಲ್ಲಿ ಕೈಗೊಳ್ಳಲಾಗಿರುವ ಜಂಟಿ ಯೋಜನೆಗಳ ಅನುಷ್ಠಾನ, ದೀರ್ಘಾವಧಿಯಿಂದ ಇರುವಂಥ ಮೀನುಗಾರರಿಗೆ ಸಂಬಂಧಿಸಿದ ವಿವಾದಗಳನ್ನು ಮಾನವೀಯ ನೆಲೆಯಲ್ಲಿ ಇತ್ಯರ್ಥಗೊಳಿಸುವುದು ಸಹಿತ ಹಲವು ವಿಚಾರಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿದ್ದು, ತಮಿಳರ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
ಇದೇ ವೇಳೆ, ರಾಜಪಕ್ಸೆ ಅವರು ಭಾರತ ಸರಕಾರದ ನೆರೆರಾಷ್ಟ್ರಗಳಿಗೆ ಆದ್ಯತೆ ಎಂಬ ನೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಚೀನ ಪ್ರಾಬಲ್ಯ ತಡೆಗೆ ಯತ್ನ: 2005 ರಿಂದ 2016ರವರೆಗೆ ಮಹಿಂದಾ ರಾಜಪಕ್ಸೆ ಅವರು ಶ್ರೀಲಂಕಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಹಿಂದೂ ಮಹಾಸಾಗರದಲ್ಲಿ ಚೀನದ ಪ್ರಾಬಲ್ಯ ಹೆಚ್ಚಾಗಿತ್ತು. ಅದು ಭಾರತದ ಕಳವಳಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ರಾಜಪಕ್ಸೆ ಅವರ 5 ದಿನಗಳ ಭಾರತ ಭೇಟಿ ಮಹತ್ವ ಪಡೆದಿದೆ.