ಲಕ್ನೋ: ದೇಶದ ಸಾಧುಗಳ ಅತಿ ದೊಡ್ಡ ಧಾರ್ಮಿಕ ಸಂಸ್ಥೆ ಅಖೀಲ ಭಾರತೀಯ ಅಖಾರ ಪರಿಷತ್ ಮುಖ್ಯಸ್ಥರಾದ ಮಹಾಂತ ನರೇಂದ್ರ ಗಿರಿ (72) ಅವರ ಮೃತದೇಹ ಸೋಮವಾರ ಉತ್ತರ ಪ್ರದೇಶದ ಬಘಂಬಾರಿ ಮಠದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಹಂತ್ ನರೇಂದ್ರ ಗಿರಿ ಅವರು ಸಾಯುವ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದರು ಎಂದು ಅವರ ಶಿಷ್ಯ ನಿರ್ಭಯ್ ದ್ವಿವೇದಿ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ವಿಡಿಯೋ ಪೊಲೀಸರ ಬಳಿ ಇದೆ ಮತ್ತು ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದು, ಶವವನ್ನು ತುಂಡರಿಸಿ ನಾಶ ಮಾಡಿದ ಪತ್ನಿ!
ಸ್ಥಳದಲ್ಲಿ ಆತ್ಮಹತ್ಯೆ ಪತ್ರವೂ ದೊರೆತಿದ್ದು, “ನಾನು ಮಾನಸಿಕವಾಗಿ ನೊಂದಿದ್ದು, ನನ್ನ ಬದುಕನ್ನು ಅಂತ್ಯಗೊಳಿಸುತ್ತಿದ್ದೇನೆ’ ಎಂದು 7-8 ಪುಟಗಳ ಪತ್ರದಲ್ಲಿ ಬರೆಯಲಾಗಿದೆ. ತಮ್ಮ ಸಾವಿನ ಬಳಿಕ ಆಶ್ರಮದ ಜವಾಬ್ದಾರಿ ಯಾರಿಗೆ ಹೋಗುತ್ತದೆ ಎಂಬ ಕುರಿತು ಉಯಿಲು ಬರೆದಿದ್ದಾರೆ ಎಂದು ಪ್ರಯಾಗ್‌ರಾಜ್ ಐಜಿಪಿ ಕೆ.ಪಿ.ಸಿಂಗ್ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯೆಂದು ಕಂಡುಬಂದರೂ, ಮರಣೋತ್ತರ ಪರೀಕ್ಷೆ ಬಳಿಕವೇ ನಿಖರ ಮಾಹಿತಿ ಗೊತ್ತಾಗಲಿದೆ ಎಂದಿದ್ದಾರೆ.
ಆನಂದ್ ಗಿರಿ ವಶಕ್ಕೆ: ಸ್ವಾಮೀಜಿ ಸಾವಿಗೆ ಸಂಬಂಧಿಸಿ ಅವರ ಶಿಷ್ಯ ಆನಂದ್ ಗಿರಿಯನ್ನು ವಶಕ್ಕೆ ಪಡೆಯಲಾಗಿದೆ. ಆತ್ಮಹತ್ಯಾ ಪತ್ರದಲ್ಲಿ ಆನಂದ್ ಗಿರಿ ಹೆಸರು ಉಲ್ಲೇಖಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಮಹಾಂತ ನರೇಂದ್ರ ಗಿರಿ ಅವರು ಅಖಾಡದ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವುದಾಗಿ ಆನಂದ್ ಆರೋಪ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಸೋಮವಾರ ಸ್ವಾಮೀಜಿ ಸಾವಿನ ಬಳಿಕ ಪ್ರತಿಕ್ರಿಯಿಸಿದ್ದ ಆನಂದ್, “ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಅವರನ್ನು ಹಣಕ್ಕಾಗಿ ಪೀಡಿಸಲಾಗುತ್ತಿತ್ತು. ಇದೊಂದು ದೊಡ್ಡ ಸಂಚು ಎಂದಿದ್ದರು.
ಇದೇ ವೇಳೆ, ಮಹಾಂತರ ಪ್ರಧಾನಿ ಮೋದಿ, ಉ.ಪ್ರದೇಶ ಸಿಎಂ ಯೋಗಿ, ಎಸ್ಪಿ ನಾಯಕ ಅಖೀಲೇಶ್ ಯಾದವ್ ಸೇರಿ ದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.