Advertisement
ನವದೆಹಲಿ: ಇಡೀ ದೇಶದಲ್ಲಿ ಕೇಸರಿ ಅಧಿಪತ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದ ಇತಿಹಾಸದಲ್ಲೇ ಸತತ ಎರಡನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವ ಕಾಂಗ್ರೇಸ್ಸೇತರ ಸರ್ಕಾರ ಎಂಬ ಹಿರಿಮೆಗೆ ಪಾತ್ರವಾಗಿದೆ. ಅಲ್ಲದೆ, ಇಂದಿರಾ ಗಾಂಧಿಯವರ ಬಳಿಕ ಸಂಪೂರ್ಣವಾಗಿ ಸ್ವಂತ ಸಾಮರ್ಥ್ಯದಿಂದ, ಸತತ ಎರಡನೇ ಬಾರಿಗೆ ಬಹುಮತದಿಂದ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ನರೇಂದ್ರ ಮೋದಿ ಗಳಿಸಿದ್ದಾರೆ.
Related Articles
Advertisement
ಇನ್ನು ಪ್ರಾದೇಶಿಕ ಪಕ್ಷಗಳ ವಿಚಾರಕ್ಕೆ ಬಂದರೆ, ಉತ್ತರಪ್ರದೇಶದಲ್ಲಿ ಮೋದಿಗೆ ಅತಿದೊಡ್ಡ ಆಘಾತ ನೀಡಲಿದೆ ಎಂದೇ ನಂಬಲಾಗಿದ್ದ ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೂಡ ಮೋದಿ ಫ್ಯಾಕ್ಟರ್ ಮುಂದೆ ಕೊಚ್ಚಿಹೋದವು. ದೀದಿಯ ಭದ್ರಕೋಟೆಯಲ್ಲೂ ಮೋದಿ-ಅಮಿತ್ ಶಾ ಜೋಡಿ ಬಿರುಕು ಮೂಡಿಸಿತು. ‘ನೀವು ಅರಿತ್ಮಾಟಿಕ್(ಅಂಕಗಣಿತ) ಅನ್ನು ನೋಡಬೇಡಿ, ಕೆಮಿಸ್ಟ್ರಿಯನ್ನು ನೋಡಿ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ಹೇಳಿದಂತೆ, ಜನಸಾಮಾನ್ಯನ ಜೊತೆಗಿನ ಮೋದಿಯ ಕೆಮಿಸ್ಟ್ರಿ ಈ ಚುನಾವಣೆಯಲ್ಲಿ ವರ್ಕ್ ಔಟ್ ಆಯಿತು.
ಇನ್ನು ಈ ಭರ್ಜರಿ ಗೆಲುವಿನಲ್ಲಿ ಮೋದಿಯ ಸಾರಥಿ ಅಮಿತ್ ಶಾ ಅವರ ಪಾಲೂ ಮಹತ್ವದ್ದೇ ಆಗಿದೆ. ಪೂರ್ವಭಾಗದಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಆಶ್ವಾಸನೆಯನ್ನು ಅವರು ಈಡೇರಿಸಿದ್ದಾರೆ. ಎನ್‌ಡಿಎಯ ಮಿಷನ್ 350ಯ ಹೀರೋ ಅಮಿತ್ ಶಾ. ತಮ್ಮ ಅದ್ಭುತ ಕಾರ್ಯತಂತ್ರ ಹಾಗೂ ಸಂಘಟನಾ ಚಾತುರ್ಯದ ಮೂಲಕ ಶಾ ಅವರು ಅಸಾಧ್ಯವಾದುದ್ದನ್ನೂ ಸಾಧಿಸಿ ತೋರಿಸಿದ್ದಾರೆ.
ಒಟ್ಟಿನಲ್ಲಿ ದೇಶದ ಜನ ಬಿಜೆಪಿಗೆ ಮತ್ತೆ 5 ವರ್ಷಗಳ ‘ಅಚ್ಛೇ ದಿನ್’ ಅನ್ನು ದಯಪಾಲಿಸಿದ್ದಾರೆ. ಆದರೆ, ಮುಂದಿನ 5 ವರ್ಷಗಳು ಬಿಜೆಪಿಗೆ ಸುಲಭದ ಹಾದಿಯಲ್ಲ. ದೇಶದ ಮುಂದಿರುವ ಹಲವು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕಾದ ಅತಿದೊಡ್ಡ ಹೊಣೆಗಾರಿಕೆಯು ಬಿಜೆಪಿಯ ಹೆಗಲಿಗೇರಿದೆ.
ಸಪ್ತ ರಾಜ್ಯಗಳಲ್ಲಿ ಏಕ ಪಕ್ಷಾಧಿಪತ್ಯ!
ಈ ಬಾರಿಯ ಚುನಾವಣೆ ಒಟ್ಟು ಏಳು ರಾಜ್ಯಗಳಲ್ಲಿ ಏಕಪಕ್ಷಾಧಿಪತ್ಯಕ್ಕೆ ಸಾಕ್ಷಿಯಾಗಿದೆ. ಈ ಪೈಕಿ ಆರು ರಾಜ್ಯಗಳನ್ನು ಬಿಜೆಪಿ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡರೆ, ದಕ್ಷಿಣ ಭಾರತದಲ್ಲಿ ರಾಜ್ಯವೊಂದನ್ನು ಇಡಿಯಾಗಿ ಕೈವಶ ಮಾಡಿಕೊಂಡ ಏಕೈಕ ಪಕ್ಷವೆಂಬ ಹೆಗ್ಗಳಿಕೆಗೆ ಆಂಧ್ರ ಪ್ರದೇಶದ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಾತ್ರವಾಗಿದೆ. ಆಂಧ್ರದ 25 ಕ್ಷೇತ್ರಗಳಲ್ಲೂ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ ಎಲ್ಲ 25 ಕ್ಷೇತ್ರಗಳು ಹಾಗೂ ತನ್ನದೇ ಪ್ರಾಬಲ್ಯವಿರುವ ಗುಜರಾತ್‌ನಲ್ಲಿರುವ 26ಕ್ಕೆ 26 ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸಿದೆ. ಉಳಿದಂತೆ ದೆಹಲಿಯಲ್ಲಿ ಎಲ್ಲ 7, ಉತ್ತರಾಖಂಡದಲ್ಲಿ 5, ಹಿಮಾಚಲ ಪ್ರದೇಶದಲ್ಲಿ 4 ಹಾಗೂ ತ್ರಿಪುರಾದ 2 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಆ ರಾಜ್ಯಗಳನ್ನು ಸಾರಾಸಗಟಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಪರಿಣಾಮ ಬೀರದ ಜಿಎಸ್‌ಟಿ, ನೋಟು ಅಮಾನ್ಯ
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವಿನ ಓಟಕ್ಕೆ ಅಪನಗದೀಕರಣವಾಗಲೀ, ಜಿಎಸ್‌ಟಿಯಾಗಲಿ ಅಡ್ಡಗಾಲಾಗಲಿಲ್ಲ. ಕಾಂಗ್ರೆಸ್, ಎರಡು ವರ್ಷದ ಹಳೆಯದಾದ ಈ ಎರಡು ವಿಷಯಗಳನ್ನೇ ತನ್ನ ಚುನಾವಣಾ ಅಸ್ತ್ರಗಳನ್ನಾಗಿಸಿಕೊಂಡು ವಾಗ್ಧಾಳಿ ನಡೆಸುತ್ತಾ ಬಂದಿದ್ದರೂ, ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವುದು ಫಲಿತಾಂಶದಿಂದ ಸಾಬೀತಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವಿನ ಓಟಕ್ಕೆ ಅಪನಗದೀಕರಣವಾಗಲೀ, ಜಿಎಸ್‌ಟಿಯಾಗಲಿ ಅಡ್ಡಗಾಲಾಗಲಿಲ್ಲ. ಕಾಂಗ್ರೆಸ್, ಎರಡು ವರ್ಷದ ಹಳೆಯದಾದ ಈ ಎರಡು ವಿಷಯಗಳನ್ನೇ ತನ್ನ ಚುನಾವಣಾ ಅಸ್ತ್ರಗಳನ್ನಾಗಿಸಿಕೊಂಡು ವಾಗ್ಧಾಳಿ ನಡೆಸುತ್ತಾ ಬಂದಿದ್ದರೂ, ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವುದು ಫಲಿತಾಂಶದಿಂದ ಸಾಬೀತಾಗಿದೆ.
ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬಿಜೆಪಿಯ ಗೆಲುವನ್ನು ನೋಡಿದರೆ ಜಿಎಸ್‌ಟಿ, ನೋಟು ಅಮಾನ್ಯವನ್ನು ಅಲ್ಲಿನ ಜನ ಸಕಾರಾತ್ಮಕವಾಗಿ ಸ್ವೀಕರಿಸಿರುವುದು ಖಾತ್ರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2016ರಲ್ಲಿ ನೋಟು ಅಮಾನ್ಯ ಹಾಗೂ 2017ರಲ್ಲಿ ಜಿಎಸ್‌ಟಿಯನ್ನು ಜಾರಿ ಮಾಡಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನಗಳ ಚುನಾವಣಾ ಪ್ರಚಾರದ ವೇಳೆ ಇದರ ವಿರುದ್ಧ ವಾಗ್ಧಾಳಿ ಮಾಡಿ, ‘ದೇಶದ ಆರ್ಥಿಕ ಪರಿಸ್ಥಿಯನ್ನು ಬುಡಮೇಲು ಮಾಡುವ ಈ ಯೋಜನೆಗಳು ದೇಶಕ್ಕೇ ಮಾರಕವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿರುವುದು ಜಿಎಸ್‌ಟಿ ಅಲ್ಲ, ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದೆಲ್ಲ ವ್ಯಂಗ್ಯವಾಡಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈಗಿನ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುತ್ತೇವೆ ಎಂದೂ ವಾಗ್ಧಾನ ನೀಡಿದ್ದರು. ಆದರೆ, ಈ ಎಲ್ಲ ಆರೋಪ, ಟೀಕೆಗಳಿಗೂ ಬಿಜೆಪಿ ತನ್ನ ಗೆಲುವಿನ ಮೂಲಕ ತಕ್ಕ ಉತ್ತರ ಕೊಟ್ಟಿದೆ.
‘ದೇಶದ ಜನರ ಭವಿಷ್ಯದ ದೀರ್ಘಕಾಲದ ಲಾಭಕ್ಕೆ, ತತ್ಕಾಲದ ನರಳಾಟವನ್ನು ಸಹಿಸಿಕೊಳ್ಳಬೇಕು ಎನ್ನುವುದನ್ನು ಜನರ ಮನ ಮುಟ್ಟಿಸಲು ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ, ಬಿಜೆಪಿ ಗೆಲುವಿನ ದೊಡ್ಡ ನಗೆ ಬೀರಿದೆ ಎನ್ನುತ್ತಾರೆ’ ರಾಜಕೀಯ ವಿಶ್ಲೇಷಕರು.