Advertisement

ಮಂಗನ ಹಾವಳಿಗೆ ಕಂಗೆಟ್ಟ ರೈತ

01:03 PM Aug 01, 2019 | Naveen |

ಸಿಕಂದರ ಎಂ.ಆರಿ
ನರೇಗಲ್ಲ:
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ರೈತರು ಕಂಗೆಟ್ಟಿದ್ದಾರೆ. ಬೆಳೆ ನಿಧಾನವಾಗಿ ಕಾಳು ಕಟ್ಟುತ್ತಿವೆ. ಇಂಥ ಸಂದರ್ಭದಲ್ಲಿ ಮಂಗಗಳು ಹೊಲ-ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಕೋಚಲಾಪೂರ, ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ಬೂದಿಹಾಳ, ಯರೇಬೇಲೇರಿ, ಕುರುಡಗಿ, ಗುಜಮಾಗಡಿ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ತೋಟಗಂಟಿ, ದ್ಯಾಂಪೂರ ಗ್ರಾಮಗಳ ವ್ಯಾಪ್ತಿ ಪ್ರದೇಶಗಳ ಹೊಲ ಹಾಗೂ ತೋಟಗಳಲ್ಲಿ ಇವು ದಾಳಿ ಮಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ರೈತರದ್ದಾಗಿದೆ.

ಈ ಹಳ್ಳಿಗಳ ಸುತ್ತಮುತ್ತಲಿನ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಮಂಗಗಳ ಹಿಂಡು ನಿತ್ಯವೂ ರೈತರು ಬೆಳೆದ ಬೆಳೆಗಳನ್ನು ಕಿತ್ತಿಕೊಳ್ಳುತ್ತಿವೆ. ಮಳೆಯಿಲ್ಲದೆ ಒಂದೆಡೆ ಬೆಳೆ ಬಾಡಿದ್ದರೆ, ಮತ್ತೂಂದೆಡೆ ಅಲ್ಪಸ್ವಲ್ಪ ಬೆಳೆಯೂ ಮಂಗಗಳ ಪಾಲಾಗುತ್ತಿವೆ ಎಂಬ ನೋವು ರೈತರಿಗೆ ಕಾಡುತ್ತಿದೆ.

ಮೊದಲೇ ಕೃಷಿ ನಿರ್ವಹಣೆ ವೆಚ್ಚ ಅಧಿಕವಾದ ಈ ದಿನಗಳಲ್ಲಿ ಈ ಹಾನಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಥ ಆರ್ಥಿಕ ಸಂಕಷ್ಟದ ನಡುವೆಯೇ ಈ ಮಂಗಗಳನ್ನು ನಿಯಂತ್ರಿಸಲು ರೈತ ಸಾವಿರಾರು ರೂಪಾಯಿ ವೆಚ್ಚ ಮಾಡಿ ಹೈರಾಣಾಗುತ್ತಿದ್ದಾನೆ. ಹಗಲಿರುಳೆನ್ನದೇ ಹೊಲ, ತೋಟ ಕಾಯುವ ಕೆಲಸ ಈತನದ್ದಾಗಿದೆ.

ಶೇಂಗಾ, ಹೆಸರು, ಬಿಟಿ, ಮೆಕ್ಕೆಜೋಳದ ಬೆಳೆಗಳು ಮಂಗಗಳ ಬಾಯಿಗೆ ಹೋಗುತ್ತಿವೆ. ಬೆಳೆ ಎರಡೆಲೆ ಇರುವಾಗಲೇ ದಾಳಿ ಮಾಡಿ ಕಡಿದು ತಿನ್ನುತ್ತಿವೆ. ಇನ್ನು ಮಾವು ಚಿಗುರೊಡೆಯುತ್ತಿರುವಾಗಲೇ ದಾಳಿ ಮಾಡುವ ಮಂಗಗಳು ಅವುಗಳನ್ನೂ ತಿನ್ನುತ್ತವೆ. ಅಷ್ಟೇ ಅಲ್ಲ ಇವು ಹಿಂಡು ಹಿಂಡಾಗಿ ಹೊಲಗಳಲ್ಲಿ ಓಡಾಡುತ್ತಿರುವುದರಿಂದ ಕಾಲ್ತುಳಿತಕ್ಕೆ ಬೆಳೆ ನಾಶವಾಗುತ್ತಿವೆ. ಮೊದಲೇ ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ದಿಕ್ಕೇ ತೋಚದಂತಾಗಿದೆ.

Advertisement

ಮಳೆ ಕೊರತೆಯಿಂದ ಈ ಬಾರಿ ಉತ್ತಮ ಮುಂಗಾರು ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಮುದಾಯ ಬೀಜ, ಗೊಬ್ಬರಕ್ಕೆ ಸಾಲ ಸೂಲ ಮಾಡಿ ಕೃಷಿ ಮಾಡಿದೆ. ಆದರೆ ಕಳೆದ ಒಂದು ತಿಂಗಳಿಂದ ಮೋಡಕವಿದ ವಾತವರಣವಿದ್ದರೂ ಮಳೆ ಆಗಿಲ್ಲ. ಈಗ ಅಲ್ಪತೇವಾಂಶದಲ್ಲಿ ಬೆಳೆದ ಬೆಳೆಯೂ ಮಂಗಗಳ ಪಾಲಾಗುತ್ತಿದೆ.

ಮಂಗಗಳ ಹಾವಳಿ ತಡೆಗೆ ಈಗಾಗಲೇ ಹೊಲದಲ್ಲಿ ಬೆದರು ಗೊಂಬೆ ಕಟ್ಟಿದ್ದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಮಂಗಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಮುಂದಾಗಬೇಕು. ಇವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಳ್ಳಬೇಕು.
ನಿಂಗನಗೌಡ ಲಕ್ಕನಗೌಡ್ರ,
 ಎಪಿಎಂಸಿ ಉಪಾಧ್ಯಕ್ಷ

ಹೆಸರು, ಶೇಂಗಾ ಬಿತ್ತನೆ ಮಾಡಲಾಗಿರುವ ಕೃಷಿ ಭೂಮಿಗಳ ಮೇಲೆ ಇನ್ನಿಲ್ಲದ ಪ್ರೀತಿ ಹೊಂದಿರುವ ಮಂಗಗಳು ನೋಡನೋಡುತ್ತಿದ್ದಂತೆಯೇ, ಬೆಳೆ ತಿಂದು ತೇಗುತ್ತಿವೆ. ಇವುಗಳನ್ನು ನಿಯಂತ್ರಿಸಲು ರೈತ ಸಮೂಹ ಪಟಾಕಿ ಸಿಡಿಸಿ, ಸಿಡಿಮದ್ದು ಹಾರಿಸಿ ಬೆದರಿಸುವ ಯತ್ನ ನಡೆಸುತ್ತಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುತ್ತಾರೆ ರೈತರು.

Advertisement

Udayavani is now on Telegram. Click here to join our channel and stay updated with the latest news.

Next