Advertisement

ಜೋಳದ ಮೇವಿಗೆ ಭಾರಿ ಬೇಡಿಕೆ

03:24 PM Mar 19, 2020 | Naveen |

ನರೇಗಲ್ಲ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಈ ಭಾಗದಲ್ಲಿ ರೈತರು ಹೆಚ್ಚಾಗಿ ಜೋಳ ಬೆಳೆದಿಲ್ಲ. ಆದರೆ, ಹಿಂಗಾರು ಹಂಗಾಮಿನಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಉತ್ತಮವಾದ ಫಸಲು ಬಂದಿದೆ.

Advertisement

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಜೋಳದ ಮೇವು, ಕಡಲೆ, ಶೇಂಗಾ, ಗೋಧಿ ಹೊಟ್ಟಿಗೆ ಭಾರೀ ಬೇಡಿಕೆ ಪ್ರಾರಂಭವಾಗಿದೆ. ರೈತರು ಹೆಚ್ಚಾಗಿ ಮಾರುಕಟ್ಟೆಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜಾನುವಾರುಗಳಿಗೆ ಹೊಟ್ಟುಮೇವು ಸಿಗದಂತಾಗಿದೆ.

ರೈತರು ಪಾರಂಪರಿಕ ಬೆಳೆಗಳಾದ ಶೇಂಗಾ, ಗೋಧಿ , ಕುಸುಬಿ, ಜೋಳದ ಬದಲು ಸೂರ್ಯಕಾಂತಿ, ಈರುಳ್ಳಿ, ಮೆಣಸಿಕಾಯಿ, ಹತ್ತಿ, ಮೆಕ್ಕೆಜೋಳದಂತಹ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಹೀಗಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಶೇಂಗಾ ಹೊಟ್ಟು, ಜೋಳ ಮೇವು, ಗೋಧಿ ಹೊಟ್ಟಿನ ಬೆಲೆ ಹೆಚ್ಚಾಗಿದೆ. ಈಗಾಗಲೇ ಹೋಬಳಿಯಾದ್ಯಂತ ಬಿಸಿಲಿನ ಪ್ರಮಾಣ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ಮೇವಿನ, ಹೊಟ್ಟಿನ ಕೊರತೆ ಜತೆಗೆ ನೀರಿನ ತಾಪತ್ರಯವೂ ಎದುರಾಗಿದೆ.

ಮಾರುಕಟ್ಟೆಯಲ್ಲಿ ಹೆಚ್ಚಾದ ಮೇವಿನ ಬೆಲೆ ಕಳೆದ ವರ್ಷ ಒಂದು ಟ್ರ್ಯಾಕ್ಟರ್‌ ಶೇಂಗಾ ಹೊಟ್ಟಿಗೆ 4 ಸಾವಿರ ರೂ. ಸಿಗುತ್ತಿತ್ತು. ಪ್ರಸಕ್ತ ವರ್ಷ 7ರಿಂದ 8 ಸಾವಿರ ರೂ. ತಲುಪಿದೆ. 3ರಿಂದ 4 ಸಾವಿರ ರೂ. ಇದ್ದ ಒಂದು ಟ್ರ್ಯಾಕ್ಟರ್‌ ಜೋಳದ ಮೇವು 5ರಿಂದ 6 ಸಾವಿರ ರೂ. ಆಗಿದೆ. ಕಡಲೆ ಹೊಟ್ಟು ಕಳೆದ ವರ್ಷ 3ರಿಂದ 4 ಸಾವಿರ ಇತ್ತು. ಆದರೆ, ಇತ್ತೀಚೆಗೆ ಪ್ರಮುಖ ನಗರಗಳಿಂದ ಜನ ಇತರೆ ಉಪಯೋಗಕ್ಕೆ ಈ ಹೊಟ್ಟನ್ನು ಬಳಸುವುದರಿಂದ ಈ ವರ್ಷ 10ರಿಂದ 12 ಸಾವಿರಕ್ಕೆ ಮಾರಾಟವಾಗಿದೆ. ಗೋಧಿ  ವರ್ಷದ ಹಿಂದೆ 3 ಸಾವಿರ ರೂ. ಇತ್ತು, ಆದರೆ, ಈ ವರ್ಷ 6ರಿಂದ 7 ಸಾವಿರ ರೂ.ಗಳಲ್ಲಿ ದೊರೆಯುತ್ತಿದೆ. ಆದ್ದರಿಂದ ಜಾನುವಾರು ಇರುವ ರೈತರು ಹೊಟ್ಟು, ಮೇವು ಖರೀದಿಸುವುದಕ್ಕೆ ಹಿಂದೆಟ್ಟು ಹಾಕುತ್ತಿದ್ದಾರೆ.

ಬೆಳೆ ಬೆಳೆದ ಕ್ಷೇತ್ರ ವ್ಯಾಪ್ತಿಯ ವಿವರ ಕಳೆದ ವರ್ಷ ಮುಂಗಾರು ಹಿಂಗಾಮಿನಲ್ಲಿ ಬೆಳೆಯುವ ಹೈಬ್ರೀಡ್‌ ಜೋಳವನ್ನು 13 ಹೆಕ್ಟೇರ್‌, ಶೇಂಗಾ 261 ಹೆಕ್ಟೇರ್‌ ಬೆಳೆಯಲಾಗಿತ್ತು. ಹಿಂಗಾರು ಹಂಗಾಮಿನ ಬಿಳಿ ಜೋಳವನ್ನು 6200 ಹೆಕ್ಟೇರ್‌, ಗೋಧಿ 900 ಹೆಕ್ಟೇರ್‌, ಕಡಲೆ 2 ಸಾವಿರ ಹೆಕ್ಟೇರ್‌, ಶೇಂಗಾ 400 ಹೆಕ್ಟೇರ್‌ ಬೆಳೆಯಲಾಗುತ್ತು. ಆದರೆ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಹೈಬ್ರೀಡ್‌ ಜೋಳವನ್ನು 54 ಹೆಕ್ಟೇರ್‌, ಶೇಂಗಾ 12 ಹೆಕ್ಟೇರ್‌ಗಳನ್ನು ಮಾತ್ರ ಬೆಳೆಯಲಾಗಿತ್ತು. ಆದರೆ, ಹಿಂಗಾರು ಹಂಗಾಮಿನ ಬಿಳಿ ಜೋಳವನ್ನು 6240 ಹೆಕ್ಟೇರ್‌, ಗೋಧಿ  998 ಹೆಕ್ಟೇರ್‌, ಕಡಲೆ 22206 ಹೆಕ್ಟೇರ್‌, ಶೇಂಗಾ 800 ಹೆಕ್ಟೇರ್‌ ಬೆಳೆಯಲಾಗಿದೆ.

Advertisement

ಅಕ್ಕಪಕ್ಕದ ಜಿಲ್ಲೆಗಳಾದ ಬಾಗಲಕೋಟೆ, ಕೊಪ್ಪಳ, ರಾಯಚೂರ, ಯಾದಗಿರಿ, ಹಾವೇರಿ, ವಿಜಯಪುರ, ಬಳ್ಳಾರಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹಕ್ಕೆ ಸಿಲಿಕ್ಕಿದ ರೈತರು ತಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳಲು ಕಂದಾಯ ಇಲಾಖೆ ಪರವಾನಗಿ ಇಲ್ಲದೆ ಅಕ್ರಮವಾಗಿ ಮೇವು ಸಾಗಣೆ ನಿರಾತಂಕವಾಗಿ ನಡೆಸಿದ್ದಾರೆ. ಪ್ರವಾಹಕ್ಕೆ ಸಿಲುಕ್ಕಿದ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಹಣದ ಆಸೆಗೆ ಮೇವು, ಹೊಟ್ಟು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು. ಹೊರ ಜಿಲ್ಲೆ ಮತ್ತು ರಾಜ್ಯಕ್ಕೆ ಅಕ್ರಮ ಸಾಗಣೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರಗಳು ಮುಂದಾಗಬೇಕು.
ಅಶೋಕ ಬಸವಡ್ಡೇರ
ಅಬ್ಬಿಗೇರಿ ಪ್ರಗತಿಪರ ರೈತ

ರೋಣ ತಾಲೂಕಿನ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಈಗಾಗಲೇ ಇಲಾಖೆ ಅನುಮತಿ ಪಡೆಯದೇ ಕೆಲವೊಂದು ಜನರು ಬಂದು ರೈತರಿಗೆ ಹಣದ ಆಸೆ ತೋರಿಸಿ ಮೇವು, ಹೊಟ್ಟು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದಕ್ಕೆ ಇಲಾಖೆ ವತಿಯಿಂದ ಕಡಿವಾಣ ಹಾಕುವ ಮೂಲಕ ಇಲ್ಲಿನ ರೈತರಿಗೆ ಹೊಟ್ಟು, ಮೇವು ದೊರೆಯುವಂತೆ ಮಾಡಲಾಗುವುದು.
ಜಿ.ಬಿ. ಜಕ್ಕನಗೌಡ್ರ, ರೋಣ
ತಹಶೀಲ್ದಾರ್‌

„ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next