Advertisement

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

05:08 PM Apr 30, 2024 | Team Udayavani |

ಗದಗ: ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಕಾನೂನನ್ನು ಮಾಡಿಬಿಡುತ್ತಾರೆ. ನಿಮಗೆ ಗ್ಯಾರಂಟಿ ಉಳಿಯಬೇಕು. ಗ್ಯಾರಂಟಿ ಬೆಳೆಯಬೇಕು ಹಾಗೂ ರಾಜ್ಯದಲ್ಲಿ ಈಗಾಗಲೇ ನಿಮ್ಮ ಮನೆಗೆ ಬಂದಿರುವ ಗೃಹಲಕ್ಷ್ಮೀ, ಮುಂದಿನ ದಿನಗಳಲ್ಲಿ ಮಹಾಲಕ್ಷ್ಮೀಯಾಗಿ ಮನೆಗೆ ಬರಬೇಕು ಎಂದರೆ ಕಾಂಗ್ರೆಸ್‌ ಗೆ ಆಶೀರ್ವಾದ ಮಾಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತದಾರರಲ್ಲಿ ಮನವಿ ಮಾಡಿದರು.

Advertisement

ನಗರದ 21ನೇ ವಾರ್ಡಿನ ಉಸಗಿನಗಟ್ಟಿ, ಯಲಿಗಾರ ಪ್ಲಾಟ್‌ನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದರಿಂದ ಗಂಡಸರೆಲ್ಲರೂ ಕುಡುಕರಾಗಿದ್ದಾರೆ, ಹೆಣ್ಣು ಮಕ್ಕಳು ದಾರಿತಪ್ಪಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ವಿರೋಧ ಪಕ್ಷದವರು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ದೇಶದ ಬಡಜನತೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ದುಡಿದ ದುಡಿಮೆ ಮಾತ್ರ ಶ್ರೀಮಂತರ ಮನೆ ಸೇರುತ್ತಿದೆ. ಇತ್ತೀಚೆಗೆ ಶ್ರೀಮಂತರೊಬ್ಬರು ಮಗನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರೊಬ್ಬರಿ 1,259 ಕೋಟಿ ರೂ. ಹಣವನ್ನು ಖರ್ಚು ಮಾಡಿದರು. ಮದುವೆಗೆ ಎಷ್ಟು ಖರ್ಚು ಮಾಡುತ್ತಾರೋ ಗೊತ್ತಿಲ್ಲ. ಅದು ಅವರು ಬೆವರು ಸುರಿಸಿದ ದುಡಿದ ದುಡ್ಡಾ ಎಂದು ಅವರು ಪ್ರಶ್ನಿಸಿದರು.

ಯಾರದೋ ದುಡಿಮೆ, ಮಜಾ ಮಾಡೋದು ಶ್ರೀಮಂತರು. ಇದೇ ಮುಂದುವರಿಯಬೇಕು ಎನ್ನುವುದು ಬಿಜೆಪಿಯವರು. ಅದಕ್ಕಾಗಿ ಅವರು ಹಾದಿಯಲ್ಲಿ, ಬೀದಿಯಲ್ಲಿ, ನಿಂತರೆ, ಕುಂತರೆ ಗ್ಯಾರಂಟಿ ಕಾರ್ಯಕ್ರಮವನ್ನು ಗೇಲಿ ಮಾಡುತ್ತಾ, ಬಿಟ್ಟಿ ಭಾಗ್ಯ ಎಂದು ಕರೆಯುತ್ತಿದ್ದಾರೆ. ಶ್ರೀಮಂತರಿಗೆ ಕೋಟಿ ಕೋಟಿ ಸಾಲ ಮನ್ನಾ ಮಾಡಿದರೆ, ಶ್ರೀಮಂತರ ಆಸ್ತಿ ಜಾಸ್ತಿಯಾದರೆ ಅದು ಬಿಟ್ಟಿಭಾಗ್ಯ ಅಲ್ಲ. ಬೆವರು ಸುರಿಸಿ ದುಡಿದು ಸಂಸಾರ ನಡೆಸುವವರಿಗೆ, ಕಷ್ಟ ಪಡುವ ಸಾಮಾನ್ಯ ಜನರಿಗೆ ತಿಂಗಳಿಗೆ 5 ಸಾವಿರ ರೂ. ಕೊಟ್ಟರೆ ಅದು ಬಿಟ್ಟಿ ಭಾಗ್ಯ ಎಂದು ಗೇಲಿ ಮಾಡುತ್ತಿರುವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.

Advertisement

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸುಳ್ಳು, ಮೋಸ ಮಾಡುವ ಪ್ರವೃತ್ತಿ ಉಳ್ಳವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ. ಕಳೆದ ಚುನಾವಣೆಯಲ್ಲಿ 21ನೇ ವಾರ್ಡಿನ ಮತದಾರರು ಕೇವಲ 51 ಮತಗಳ ಲೀಡ್ ಕೊಟ್ಡಿದ್ದೀರಿ. ಈ ಬಾರಿ ಕನಿಷ್ಠ 500 ಮತಗಳ ಲೀಡ್ ಕೊಡಲೇಬೇಕು. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ವಿಶೇವಾಗಿ ಆಶೀರ್ವಾದ ಮಾಡಿ ಸಂಸತ್ತಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next